ಮಡಿಕೇರಿ, ಜ. ೧೯: ಕುಶಾಲನಗರ ಹೋಬಳಿಯ ಬೈಚನಹಳ್ಳಿಯಲ್ಲಿ ಬಿ.ಎನ್. ರಾಧಾಕೃಷ್ಣ ಹಾಗೂ ಆರ್. ವಸಂತಮ್ಮ ಎಂಬವರಿಗೆ ಅಕ್ರಮ ಸಕ್ರಮದಡಿ ಮಂಜೂರಾಗಿದ್ದ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕುಶಾಲನಗರ ಭೂಗಳ್ಳರ ವಿರುದ್ಧ ಹೋರಾಟ ಸಮಿತಿ ಪ್ರಮುಖ ಎಂ.ಇ. ಮೊಹಿದ್ದಿನ್ ಈ ಬಗ್ಗೆ ಮಾಹಿತಿ ನೀಡಿದರು. ಬಿ.ಎನ್. ರಾಧಾಕೃಷ್ಣ ಹಾಗೂ ಆರ್. ವಸಂತಮ್ಮ ಎಂಬವರುಗಳಿಗೆ ೧೯೯೩ರಲ್ಲಿ ಗೋಮಾಳ ಜಾಗವನ್ನು ಮಂಜೂರಾತಿ ಮಾಡಿರುವ ಬಗ್ಗೆ ಪ್ರಶ್ನಿಸಿ ಕಾನೂನು ಹೋರಾಟ ಮಾಡಲಾಗಿತ್ತು. ನಿಯಮ ಉಲ್ಲಂಘಿಸಿರುವುದಕ್ಕೆ ಪೂರಕ ದಾಖಲಾತಿಗಳನ್ನು ಸಲ್ಲಿಸಲಾಗಿತ್ತು. ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿ ಈಶ್ವರಕುಮಾರ್ ಖಂಡೂ ಅವರು, ಬಿ.ಎನ್. ರಾಧಾಕೃಷ್ಣ ಅವರಿಗೆ ಬೈಚನಹಳ್ಳಿಯಲ್ಲಿ ಸರ್ವೆ ನಂ. ೨/೪ರಲ್ಲಿ ಮಂಜೂರಾಗಿದ್ದ ೦.೪೫ ಎಕರೆ, ಆರ್. ವಸಂತಮ್ಮ ಅವರಿಗೆ ಮಂಜೂರಾಗಿದ್ದ ಸರ್ವೆ ನಂ. ೨/೫ರ ೧ ಎಕರೆ ಮತ್ತು ಸ.ನಂ. ೨/೬ರ ೦.೭೦ ಎಕರೆ ಜಮೀನನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳುವಂತೆ ಆದೇಶ ನೀಡಿದ್ದಾರೆ ಎಂದು ಮೊಹಿದ್ದಿನ್ ಮಾಹಿತಿಯಿತ್ತರು.
ಈ ಪ್ರಕರಣ ಮಾತ್ರವಲ್ಲದೆ ಕುಶಾಲನಗರ ವ್ಯಾಪ್ತಿಯಲ್ಲಿ ಹಲವಾರು ಪ್ರಭಾವಿಗಳು ಈಗಾಗಲೇ ಮಾಡಿರುವ ಭೂಕಬಳಿಕೆ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ವಕೀಲರಾದ ಬಸವರಾಜ್ ಉಪಸ್ಥಿತರಿದ್ದರು.