ಸೋಮವಾರಪೇಟೆ, ಜ. ೧೯: ಸೋಮವಾರದಂದು ನಡೆಯುವ ಸೋಮವಾರಪೇಟೆ ಪಟ್ಟಣದ ಸಂತೆಯನ್ನು ಮುಂದಿನ ಆದೇಶ ದವರೆಗೆ ಆರ್‌ಎಂಸಿ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರ ಹಾಗೂ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಗಳಿಗೆ ಮುಂದಿನ ೧ ವಾರ ರಜೆ ಘೋಷಣೆ ಸೇರಿದಂತೆ ಇನ್ನಿತರ ಮುಂಜಾಗ್ರತಾ ಕ್ರಮಗಳನ್ನು ಕೊರೊನಾ ಹಿನ್ನೆಲೆ ಕೈಗೊಳ್ಳಲಾಗಿದೆ.

ಪ.ಪಂ. ಸಭಾಂಗಣದಲ್ಲಿ ಅಧ್ಯಕ್ಷ ಪಿ.ಕೆ. ಚಂದ್ರು ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ, ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯಿತು.

ಮುಂದಿನ ವಾರದಿಂದ ಸೋಮವಾರದ ಸಂತೆಯನ್ನು ಶಾಂತಳ್ಳಿ ರಸ್ತೆಯಲ್ಲಿರುವ ಆಲೇಕಟ್ಟೆ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸುವುದು, ಪ.ಪಂ. ವ್ಯಾಪ್ತಿಯ ಎಲ್ಲಾ ಅಂಗನವಾಡಿಗಳಿಗೆ ೧ ವಾರಗಳ ಕಾಲ ರಜೆ ನೀಡುವುದು, ಪಟ್ಟಣದಲ್ಲಿ ಸ್ಯಾನಿಟೈಸರ್ ಮಾಡುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುವುದು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದರೊಂದಿಗೆ ಪಟ್ಟಣದ ಕ್ಯಾಂಟೀನ್ ಹಾಗೂ ಹೊಟೇಲ್‌ಗಳಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡುವುದು, ಗ್ರಾಹಕರಿಗೆ ಬಿಸಿನೀರು ಒದಗಿಸುವುದು, ಸಪ್ಲೆöÊರ‍್ಸ್ಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನಿರ್ದೇಶನ ನೀಡಲು ಸಭೆ ತೀರ್ಮಾನಿಸಿತು. ಪಟ್ಟಣ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಧ್ಯಕ್ಷ ಪಿ.ಕೆ. ಚಂದ್ರು ಅವರು, ಸಾರ್ವಜನಿಕರು ಕಡ್ಡಾಯ ವಾಗಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಪಂಚಾಯಿತಿ ಸದಸ್ಯರುಗಳು, ಮುಖ್ಯಾಧಿಕಾರಿ ನಾಚಪ್ಪ, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.