ನಾಪೋಕ್ಲು, ಜ. ೧೯: ನಗರದ ಮಾರುಕಟ್ಟೆ ಬಳಿಯಿಂದ ಪೆಟ್ರೋಲ್ ಬಂಕ್‌ವರೆಗೆ ರಸ್ತೆಗಳು ಗುಂಡಿ ಬಿದ್ದು ಸಂಚಾರಕ್ಕೆ ಅಯೋಗ್ಯವಾಗಿದ್ದು ರಸ್ತೆಯನ್ನು ಡಾಂಬರೀಕರಣ ಗೊಳಿಸುವಂತೆ ಒತ್ತಾಯಿಸಿ ನಗರದ ವಾಹನ ಚಾಲಕ ಮತ್ತು ಮಾಲೀಕರ ಸಂಘ, ಚೇಂಬರ್ ಆಫ್ ಕಾಮರ್ಸ್ ಮತ್ತು ಸಾರ್ವಜನಿಕರು ನಗರದ ರಸ್ತೆ ಮಧ್ಯೆ ಬಾಳೆ ಗಿಡ ನೆಟ್ಟು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಡಾಂಬರೀಕರಣಕ್ಕೆ ಮುಂದಾಗಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.

ಸುಮಾರು ರೂ. ೮೦ ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ನಗರದ ರಸ್ತೆಗಳಲ್ಲಿ ಭಾರೀ ಗುಂಡಿಗಳಿದ್ದು ವಾಹನಗಳು ಹಾವಿನಂತೆ ಚಲಿಸಬೇಕಾದ ಸ್ಥಿತಿ ಹಾಗೂ ಜನರು ನಡೆಯಲಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಹಲವಾರು ಬಾರಿ ಇಲಾಖೆಯ ಗಮನ ಸೆಳೆಯಲಾಗಿತ್ತು. ಇದನ್ನು ಮನಃಗಂಡ ಇಲಾಖೆಯ ಅಭಿಯಂತರ ಸತೀಶ್ ಮತ್ತು ದೇವರಾಜ್ ಕಾರ್ಯಪ್ರವೃತ್ತರಾಗಿ ಇಂದು ಕಾಮಗಾರಿಯನ್ನು ಪ್ರಾರಂಭಿಸಿದ್ದಾರೆ.