ಸೋಮವಾರಪೇಟೆ, ಜ. 18: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೇವೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನಲ್ಲಿ 28 ಸಾಮಾನ್ಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೀಶ್ ಹೇಳಿದರು. ಯೋಜನೆಯ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾ ಗಾರದಲ್ಲಿ ಮಾತನಾಡಿದ ಅವರು, ಸರ್ಕಾರದ ಸೇವೆಗಳನ್ನು ಜನರಿಗೆ ನೀಡುವ ಉದ್ದೇಶದಿಂದ ಸಂಸ್ಥೆಯಿಂದ ತರಬೇತಿ ನಡೆಸಲಾಗುತ್ತಿದೆ ಎಂದರು. ಜಿಲ್ಲಾ ಡಿಜಿಟಲ್ ಕಾಮನ್ ಸೇವಾ ಕೇಂದ್ರಗಳ ವ್ಯವಸ್ಥಾಪಕ ಮಹಾಂತೇಶ್ ಮಾತನಾಡಿ, ಈ ಕಾರ್ಯಕ್ರಮದಡಿ ಸಾರ್ವಜನಿಕರಿಗೆ ನೀಡಬಹುದಾದ ವಿವಿಧ ಸೇವೆಗಳ ಪರಿಚಯ, ಕರ್ತವ್ಯ ನಿರ್ವಹಣೆ ಹಾಗೂ ಎದುರಾಗುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಸೇವಾ ಕೇಂದ್ರಗಳ ಆಪರೇಟರ್ಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಲಾಯಿತು. ಉಡುಪಿಯ ರಾಷ್ಟ್ರೀಯ ಸ್ವಸಹಾಯ ಸಂಘದ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಉಲ್ಲಾಸ್ ಮೇಸ್ತ ಅವರು, ಜನಸಾಮಾನ್ಯರಿಗೆ ಸ್ಪಂದನ ಕೇಂದ್ರಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಜಿಲ್ಲಾ ಯೋಜನಾಧಿಕಾರಿ ಸುಕ್ರು ಎನ್. ಗೌಡ, ತಾಲೂಕು ಯೋಜನಾಧಿಕಾರಿ ರೋಹಿತ್ ಎಚ್., ಜಿಲ್ಲಾ ಮತ್ತು ತಾಲೂಕು ನೋಡೆಲ್ ಅಧಿಕಾರಿಗಳು, ಐಟಿ ಪ್ರಬಂಧಕರು, ಹಣಕಾಸು ಪ್ರಬಂಧಕರು ಉಪಸ್ಥಿತರಿದ್ದರು.