ಮಡಿಕೇರಿ, ಜ. 18: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಜನರು ಭಯಪಡಬೇಕಾಗಿಲ್ಲ. ಬದಲಾಗಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವ ಮೂಲಕ ಜಿಲ್ಲಾಡಳಿತ ದೊಂದಿಗೆ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಬಿ.ಸಿ. ಸತೀಶ ಅವರು ಮನವಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪಾಸಿಟಿವಿಟಿ ರೇಟ್ ನಿತ್ಯ ಏರಿಳಿತವಾಗುತ್ತಿದೆ. ಜಿಲ್ಲೆಯಲ್ಲಿ ಲಕ್ಷಣ ರಹಿತ ಸೋಂಕಿತರು ಹೆಚ್ಚಿದ್ದಾರೆ. ಐಸಿಯು ಹಾಗೂ ಆಕ್ಸಿಜನ್ ಅವಲಂಬಿತ ಸೋಂಕಿತರು ಕಡಿಮೆ ಇದ್ದಾರೆ. ಯಾವುದೇ ಆತಂಕಕ್ಕೆ ಜನ ಒಳಗಾಗಬೇಕಾಗಿಲ್ಲ. ಶಾಲೆಗಳಲ್ಲಿ ಓರ್ವ ವಿದ್ಯಾರ್ಥಿಗೆ ಸೋಂಕು ಪತ್ತೆಯಾದಲ್ಲಿ ಇಡೀ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳನ್ನು ತಪಾಸಣೆಗೊಳ ಪಡಿಸಲಾಗುವುದು. ಜ. 17 ರ ನಂತರ ಕೋವಿಡ್ ಹೆಚ್ಚಾಗಿ ನಂತರ ಇಳಿಮುಖವಾಗಲಿದೆ ಎಂದು ತಜ್ಞರು ವರದಿ ನೀಡಿದ್ದಾರೆ. ಈ ಹಿನ್ನೆಲೆ ಮುಂಜಾಗ್ರತ ಕ್ರಮ ಅವಶ್ಯಕವಾಗಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಸೋಂಕಿತ ಶಾಲಾ ವಿದ್ಯಾರ್ಥಿಗಳು ಗುಣಮುಖರಾಗಿದ್ದಾರೆ ಎಂದರು.