ಕುಶಾಲನಗರ, ಜ. 18: ಕೊರೊನಾ ಸೋಂಕಿನ ಮೂರನೇ ಅಲೆ ಅತಿವೇಗವಾಗಿ ಹರಡುತ್ತಿದ್ದು ಈ ನಿಟ್ಟಿನಲ್ಲಿ ವಾರಂತ್ಯದ ಕಫ್ರ್ಯೂ ವಿಸ್ತರಣೆ ಅಗತ್ಯವಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆಕ್ಸಿಜನ್ ಘಟಕ ಮತ್ತು ಜನರೇಟರ್ ವಿಭಾಗಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಎಲ್ಲೆಡೆ ಅತಿವೇಗವಾಗಿ ಕೊರೊನಾ ಸೋಂಕು ಏರಿಕೆಯಾಗುತ್ತಿದೆ. ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ತಪ್ಪಿದಲ್ಲಿ ಭಾರಿ ಸಮಸ್ಯೆ ಉಂಟಾಗಬಹುದು ಎಂದು ಹೇಳಿದರು.
ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು ಎಂದು ತಿಳಿಸಿದ ಶಾಸಕರು, ವಾರಾಂತ್ಯದ ಕಫ್ರ್ಯೂ ಸಂಬಂಧ ಹೋಟೆಲ್ ಮಾಲೀಕರು ಮತ್ತಿತರ ವಾಣಿಜ್ಯ ವ್ಯಾಪಾರಸ್ಥರು ವಾರಂತ್ಯ ಕಫ್ರ್ಯೂ ತೆರವುಗೊಳಿಸಲು ಮಾಡಲು ಮನವಿ ಮಾಡುತ್ತಿದ್ದಾರೆ. ಈ ಸಂಬಂಧ ಸರ್ಕಾರವೇ ಕ್ರಮಕೈಗೊಳ್ಳಬೇಕಾಗಿದೆ. ಆದರೆ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ವಾರಾಂತ್ಯದ ಕಫ್ರ್ಯೂ ವಿಸ್ತರಣೆ ಮಾಡುವುದು ಉತ್ತಮ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ತಾಲೂಕು ಮಟ್ಟದ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಈ ಸಂಬಂಧ 4 ಎಕರೆ ಪ್ರದೇಶದ ಜಾಗ ಪರಿಶೀಲನೆಯಲ್ಲಿದೆ ಎಂದು ಹೇಳಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ ವೆಂಕಟೇಶ ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ನೀಗಿಸಲು ಕ್ರಮಕೈಗೊಳ್ಳಲಾಗಿದೆ. ಹೆಚ್ಚಿನ ಸಿಬ್ಬಂದಿಗಳನ್ನು ಆಸ್ಪತ್ರೆಗೆ ನಿಯೋಜಿಸಲಾಗುವುದು ಎಂದು ಹೇಳಿದರು.
ಕುಶಾಲನಗರ ಸೋಮವಾರಪೇಟೆ ತಾಲೂಕು ಆರೋಗ್ಯ ಕೇಂದ್ರಗಳಿಗೆ 45 ಕಿಲೋ ವ್ಯಾಟ್ ಸಾಮಥ್ರ್ಯದ ಜನರೇಟರ್‍ಗಳನ್ನು ಮೋಬಿಯಸ್ ಫೌಂಡೇಶನ್ ಕೊಡುಗೆ ನೀಡಿದ್ದು ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಿಗೆ ಒಟ್ಟು ಒಂದು ಕೋಟಿ ರೂಗಳ ಸಹಾಯಹಸ್ತ ಕಲ್ಪಿಸಿರುವುದಾಗಿ ಶಾಸಕ ರಂಜನ್ ತಿಳಿಸಿದರು.
ಈ ಸಂದರ್ಭ ಮೋಬಿಯಸ್ ಫೌಂಡೇಶನ್ ಯೋಜನಾ ನಿರ್ದೇಶಕ ಎಂ.ಬಿ ಬೋಪಣ್ಣ ತಾಲೂಕು ವೈದ್ಯಾಧಿಕಾರಿ ಬಾ. ಶ್ರೀನಿವಾಸ್ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಡಾ.ಮಧುಸೂದನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್, ಕುಡ ಅಧ್ಯಕ್ಷ ಎಂ.ಎಂ. ಚರಣ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮತ್ತಿತರರು ಇದ್ದರು.