ಕೊಡ್ಲಿಪೇಟೆ, ಜ. 18: ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಒಣ ಹುಲ್ಲು ಸಾಗಾಟಗೊಳಿಸುತ್ತಿರುವುದಕ್ಕೆ ನಿರ್ಬಂಧ ವಿಧಿಸಿ, ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಜಿಲ್ಲಾಡಳಿತ ಕ್ರಮವಹಿಸಬೇಕೆಂದು ಬಿಜೆಪಿ ಕೃಷಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಡಿ. ಭಗವಾನ್ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಹೈನುಗಾರಿಕೆ ಪ್ರಗತಿ ಕಾಣುತ್ತಿದ್ದು ಕೊವಿಡ್ 19 ನಂತರ ಉದ್ಯೋಗ ಕಳೆದುಕೊಂಡವರು, ಭೂ ರಹಿತರು, ಸಣ್ಣ ಹಿಡುವಳಿದಾರರು, ಮಹಿಳೆಯರು ಮತ್ತು ಅನೇಕ ಯುವಕರು ಜೀವನ ನಿರ್ವಣೆಗಾಗಿ ಪಶು ಸಂಗೋಪನೆ ಕೈಗೊಂಡು ಹಾಲು ಮತ್ತು ಹಾಲಿನ ಇತರೆ ಉತ್ಪನ್ನಗಳ ಮಾರಾಟದಿಂದ ಜೀವನ ಕಂಡುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಗದ್ದೆ ಬೇಸಾಯವು ಹವಾಮಾನ ವ್ಯೆಪರೀತ್ಯ ಹಾಗೂ ಇನ್ನಿತರ ಕಾರಣಗಳಿಂದ ಕ್ಷೀಣಗೊಳ್ಳುತ್ತಿದೆ. ಅಲ್ಲದೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಸುರಿದ ಆಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿದ್ದು ಭತ್ತದ ಹುಲ್ಲು ಮಳೆಗೆ ಕರಗಿದೆ. ಈ ಹಿನ್ನೆಲೆ ಬೇಸಿಗೆಯಲ್ಲಿ ಜಾನುವಾರುಗಳ ಮೇವಿಗೆ ಆಭಾವವಾಗುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಭಗವಾನ್ ಅಭಿಪ್ರಾಯಿಸಿದ್ದಾರೆ. ಸದ್ಯ ಕೊಡ್ಲಿಪೇಟೆ ಹಾಗೂ ಜಿಲ್ಲೆಯ ಗಡಿಭಾಗದ ಗ್ರಾಮಗಳಿಂದ ಲಾರಿ, ಇನ್ನಿತರ ವಾಹನಗಳಲ್ಲಿ ಅನೇಕ ಲೋಡ್ ಒಣಹುಲ್ಲು ಹೊರ ಜಿಲ್ಲೆಗೆ ಸಾಗಾಣಿಕೆಯಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಜಾನುವಾರುಗಳ ಮೇವಿಗೆ ಅಭಾವ ಎದುರಾಗಲಿದ್ದು, ಈಗಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಒಣಹುಲ್ಲು ಸಂಗ್ರಹಕ್ಕೆ ಕ್ರಮ ವಹಿಸಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.