ವೀರಾಜಪೇಟೆ, ಜ. ೧೭: ವೀರಾಜಪೇಟೆಯ ಕಲ್ಲುಬಾಣೆಯ ರಸ್ತೆ ನಿರ್ಮಾಣಕ್ಕೆ ಇಂದು ಶಾಸಕ ಕೆ.ಜಿ ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.

ಇಪ್ಪತ್ತು ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿU ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು. ಕಲ್ಲುಬಾಣೆಗೆ ರಸ್ತೆ ಬೇಕೆಂಬುದು ಬಹಳ ವರ್ಷದ ಬೇಡಿಕೆ. ಇಲ್ಲಿ ಕೆಲವು ಬಾರಿ ಚುನಾವಣಾ ಬಹಿಷ್ಕಾರ, ಪ್ರತಿಭಟನೆ ಮಾಡಿದ್ದನ್ನು ಗಮನಿಸಿದ್ದೇನೆ. ಏನೇ ಇರಲಿ ಅದು ನಿಮ್ಮ ಹಕ್ಕು. ಆದರೀಗ ರಸ್ತೆ ಕಾಮಗಾರಿಗೆ ಒಟ್ಟು ಇಪ್ಪತ್ತು ಲಕ್ಷ ಹಣ ಬಿಡುಗಡೆಯಾಗಿದೆ. ಆದರೆ ಒಂದು ಸಮಸ್ಯೆ ಏನೆಂದರೆ, ರಸ್ತೆಗೆ ಜಾಗ ಬಹಳ ಇಕ್ಕಟ್ಟಾಗಿದೆ. ಇಷ್ಟು ಸಣ್ಣ ಜಾಗದಲ್ಲಿ ರಸ್ತೆ ಮಾಡಿ ಪ್ರಯೋಜನವಾಗುವುದಿಲ್ಲ. ಆದರೆ ಇಲ್ಲಿ ಯಾರು ರಸ್ತೆಗೆ ಜಾಗ ಬಿಟ್ಟು ಕೊಡಲು ತಯಾರಿಲ್ಲ. ರಸ್ತೆಗೆ ಜಾಗ ಬಿಟ್ಟು ಕೊಟ್ಟರೆ ಶಾಶ್ವತವಾದ ಸುಸಜ್ಜಿತ ರಸ್ತೆಯನ್ನು ನಿರ್ಮಾಣ ಮಾಡಬಹುದು ಎಂದರು.

ಬಳಿಕ ಒಂದನೇ ಪೆರುಂಬಾಡಿ ಗ್ರಾಮದಲ್ಲಿ ಆರೂವರೆ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಂಕ್ರಿಟ್ ರಸ್ತೆಯನ್ನು ಕೆ.ಜಿ. ಬೋಪಯ್ಯ ಉದ್ಘಾಟನೆ ಮಾಡಿದರು. ಈ ಸಂದರ್ಭ ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಬಿ. ಪಾರ್ವತಿ, ಉಪಾಧ್ಯಕ್ಷ ಉಪೇಂದ್ರ ಕೆ.ಎನ್. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜನ್, ಆರ್ಜಿ ಗ್ರಾಮ ಪಂಚಾಯಿತಿ ಸದಸ್ಯರು, ಬಿಜೆಪಿ ಜಿ.ಪಂ. ಮಾಜಿ ಸದಸ್ಯರುಗಳಾದ ಅಚ್ಚಪಂಡ ಮಹೇಶ್ ಗಣಪತಿ, ಮೂಕೊಂಡ ಶಶಿ ಸುಬ್ರಮಣಿ, ತಾ.ಪಂ. ಸದಸ್ಯರಾದ ಬಿ.ಎಂ. ಗಣೇಶ್, ಜೋಕೀಂ ರೋಡ್ರಿಗ್ರಸ್, ರಘು ನಾಣಯ್ಯ, ಮಧು ದೇವಯ್ಯ, ಚುಪ್ಪ ನಾಗರಾಜ್, ಕಲ್ಲುಬಾಣೆ ಗ್ರಾಮಸ್ಥರು, ಒಂದನೇ ಪೆರುಂಬಾಡಿ ಗ್ರಾಮಸ್ಥರು ಹಾಜರಿದ್ದರು.