ಸೋಮವಾರಪೇಟೆ, ಜ. ೧೭: ತಾಯಿ ಭುವನೇಶ್ವರಿ ದೇವಿಯ ದೇಗುಲ ಹಾಗೂ ಕನ್ನಡ ಸಂಸ್ಕೃತಿಯ ಅನಾವರಣ ಲೋಕ ನಿರ್ಮಾಣಕ್ಕಾಗಿ ಆಯೋಜನೆಗೊಂಡಿರುವ ಕನ್ನಡ ಶಾಶ್ವತ ಸಾಮ್ರಾಜ್ಯ ರಥಯಾತ್ರೆ ಪಟ್ಟಣದಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.
ಇದೇ ಪ್ರಥಮವಾಗಿ ತಾಯಿ ಭುವನೇಶ್ವರಿ ದೇವಿಯ ದೇವಾಲಯವನ್ನು ಬೆಂಗಳೂರು ಸಮೀಪದ ಮಾಗಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಇದೇ ಆವರಣದೊಳಗೆ ವಸ್ತು ಸಂಗ್ರಹಾಲಯ, ವೃದ್ಧಾಶ್ರಮ, ಅನಾಥಾಶ್ರಯ, ವೇದಪಾಠ ಶಾಲೆ, ಗೋಶಾಲೆ, ಆಸ್ಪತ್ರೆ, ಬಯಲು ರಂಗಮAದಿರ, ನಾಟಕ ಮಂದಿರ, ಕಲಾ ತರಬೇತಿ, ವೃತ್ತಿಪರ ತರಬೇತಿ, ಕನ್ನಡ ಕಲಿಕಾ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಸಮಿತಿಯ ಸಂಸ್ಥಾಪಕ ವಿ. ನಾಗಪ್ಪ ತಿಳಿಸಿದರು.
ರಾಜ್ಯದಾದ್ಯಂತ ೧೦೮ ದಿನಗಳ ಕಾಲ ರಥಯಾತ್ರೆ ಸಂಚರಿಸಲಿದೆ. ಪ್ರತಿ ಜಿಲ್ಲೆಯ ಪವಿತ್ರ ಕ್ಷೇತ್ರಗಳಿಂದ ಒಂದು ಹಿಡಿ ಮಣ್ಣು ಸಂಗ್ರಹಿಸಲಾಗುತ್ತಿದ್ದು, ನಂತರ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು. ಈ ಸಂದರ್ಭ ಸಮಿತಿಯ ಪೂವಪ್ಪ ಗೌಡ, ಶ್ರೀನಿವಾಸ್, ಕುಮಾರ್, ಗಜೇಂದ್ರ, ಶಿವಲಿಂಗಯ್ಯ, ಹಾನಗಲ್ಲು ಗ್ರಾ.ಪಂ. ಸದಸ್ಯ ಕೆ.ಎ. ಪ್ರಕಾಶ್ ಅವರುಗಳು ಉಪಸ್ಥಿತರಿದ್ದರು.