ಕಣಿವೆ, ಜ. ೧೭: ಹಾಡಹಗಲೇ ಕಾಡಾನೆಯೊಂದು ಕಾಫಿ ತೋಟದ ಕಾರ್ಮಿಕನ ಮೇಲೆ ಧಾಳಿ ನಡೆಸಿ ಗಾಯಗೊಳಿಸಿದ ಘಟನೆ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದಾಸವಾಳದಲ್ಲಿ ಜರುಗಿದೆ.
ಗ್ರಾಮದ ಡಾ.ಚೆಂಗಪ್ಪ ಎಂಬವರ ಕಾಫಿ ತೋಟದಲ್ಲಿ ಕಾಫಿ ಕೊಯ್ಲು ಮಾಡುತ್ತಿದ್ದ ನಂಜನಗೂಡು ಮೂಲದ ಮಹದೇವಸ್ವಾಮಿ ಗಾಯಗೊಂಡ ಕಾರ್ಮಿಕ.
ಸೋಮವಾರ ಬೆಳಿಗ್ಗೆ ೯ ಗಂಟೆ ಸಮಯದಲ್ಲಿ ಕಾರ್ಮಿಕರ ತಂಡ ಕಾಫಿ ಹಣ್ಣು ಕೊಯ್ಲು ಮಾಡುತ್ತಿದ್ದ ಸಂದರ್ಭ ಏಕಾಏಕಿ ಬಂದ ಕಾಡಾನೆ ಕಂಡು ಉಳಿದ ಕಾರ್ಮಿಕರು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಆದರೆ, ತೋಟದಲ್ಲಿ ಏಕಾಂಗಿಯಾಗಿ ಸಿಕ್ಕ ಮಹದೇವಸ್ವಾಮಿ ಮೇಲೆ ಕಾಡಾನೆ ಎರಗಿದ ಸಂದರ್ಭ ಆತನ ಸೊಂಟದ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕುಶಾಲನಗರದ ವಲಯದ ಅರಣ್ಯಾಧಿಕಾರಿಗಳಾದ ಅನಿಲ್ಕುಮಾರ್, ಸುಬ್ರಾಯ, ರವಿಯತ್ನಾಳ ತಂಡ ಧಾವಿಸಿ ಆ್ಯಂಬ್ಯುಲೆನ್ಸ್ ಮೂಲಕ ಗಾಯಾಳುವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚುವರಿ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ.
ದುಬಾರೆಯ ಅರಣ್ಯದ ಕಾವೇರಿ ನದಿಯಂಚಿನ ಉದ್ದಕ್ಕೂ ಕಾಡಾನೆ ಹಾವಳಿ ತಡೆಯಲು ರೈಲ್ವೆ ಕಂಬಿ ಬೇಲಿ ಅಳವಡಿಸುತ್ತಿರುವ ಕಾಮಗಾರಿ ಅಪೂರ್ಣವಾಗಿರುವ ಕಾರಣ ಕಾಡಿನಿಂದ ನಾಡಿನತ್ತ ಧಾವಿಸುವ ಕಾಡಾನೆಗಳು ಕಾಡಿಗೆ ಮರಳಲು ಸಾಧ್ಯವಾಗದೇ ಜನವಸತಿ ಪ್ರದೇಶಗಳತ್ತ ಬರುತ್ತಿವೆ. ಇದರಿಂದಾಗಿ ಕಾಡಂಚಿನ ಬೆಳೆಗಾರರು ಹಾಗೂ ನಿವಾಸಿಗಳಿಗೆ ಆತಂಕ ಎದುರಾಗುತ್ತಿದೆ ಎಂದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಅರಣ್ಯ ಇಲಾಖೆ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೀನುಕೊಲ್ಲಿ ಅರಣ್ಯದ ಭಾಗದಲ್ಲಿ ಕಾಡಾನೆ ಹಾವಳಿ ತಡೆಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಕಾಫಿ ಬೆಳೆಗಾರರು ಬೆಳೆ ಹಾನಿ ಸಮಸ್ಯೆ ಅನುಭವಿಸಿದರೆ, ತೋಟದ ಕಾರ್ಮಿಕರಿಗೆ ಜೀವ ಭಯ ಕಾಡುತ್ತಿದೆ. ಇಂತಹ ಘಟನೆಗಳಿಂದಾಗಿ ಕಾರ್ಮಿಕರು ತೋಟಗಳಿಗೆ ಕೆಲಸಕ್ಕೆ ಬಾರದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಈ ಭಾಗದ ಕಾಫಿ ಬೆಳೆಗಾರರು ದೂರಿದ್ದಾರೆ.
ವರದಿ: ಕೆ.ಎಸ್. ಮೂರ್ತಿ