ಗೋಣಿಕೊಪ್ಪಲು, ಜ. ೧೭: ಕಾಫಿ ತೋಟದ ಮಾಲೀಕರು ತೋಟಕ್ಕೆ ಬೇಲಿ ಹಾಕುವುದನ್ನು ಪ್ರಶ್ನಿಸಲು ತೆರಳಿದ ವೇಳೆ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ದೂರಿನ್ವಯ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಎಂಟು ಮಂದಿಯ ಮೇಲೆ ಪ್ರಕರಣ ದಾಖಲಾಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಯಿತು.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸದೆ ಪ್ರತಿಭಟನೆ ಹಿಂಪಡೆಯುವ ಪ್ರಶ್ನೆಯೆ ಇಲ್ಲವೆಂದು ಹಠಕ್ಕೆ ಬಿದ್ದ ಪ್ರತಿಭಟನಾಕಾರರು ಅಮಾಯಕ ರೈತರ ಮೇಲೆ ದಾಖಲಾಗಿರುವ ಮೊಕದ್ದಮೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ನಂತರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತೋಟಕ್ಕೆ ತೆರಳಲು ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಪೊಲೀಸರು ಎಚ್ಚರಿಕೆ ನೀಡಬೇಕು ಹಾಗೂ ರೈತರ ತೋಟದ ಬೇಲಿಯನ್ನು ಕಿತ್ತು ಹಾಕಿರುವವರ ಮೇಲೆ ಪೊಲೀಸ್ ಪ್ರಕರಣ ದಾಖಲಿಸುವಂತೆ ಪಟ್ಟು ಹಿಡಿದರು.
ಸ್ಥಳಿಯ ಕೊಡವ ಸಮಾಜದ ಆವರಣದಲ್ಲಿ ಜಮಾವಣೆಗೊಂಡ ತಾಲೂಕಿನ ವಿವಿಧ ಭಾಗದಿಂದ ಆಗಮಿಸಿದ ನೂರಾರು ಸಂಖ್ಯೆಯ ರೈತ ಸಂಘದ ಸದಸ್ಯರು, ನಾಗರಿಕರು ಮೆರವಣಿಗೆಯಲ್ಲಿ ಸಾಗಿ ಹುದಿಕೇರಿಯ ಉಪಠಾಣೆಯ ಮುಂದೆ ಜಮಾವಣೆಗೊಂಡರು.
ಬೇರೆ ಕಡೆಯಿಂದ ಆಗಮಿಸಿರುವ ಹಾಗೂ ಸೂಕ್ತ ದಾಖಲಾತಿ ಇಲ್ಲದ ಕೆಲವರು ಪರಿಶಿಷ್ಟ ವರ್ಗಗಳ ನೆಪದಲ್ಲಿ ಇಲ್ಲಿನ ರೈತರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ. ಇದರಿಂದಾಗಿ ಅಶಾಂತಿಗೆ ಕಾರಣರಾಗಿದ್ದವರ ಮೇಲೆ ಕಾನೂನು ಕ್ರಮಕೈಗೊಳ್ಳಲು ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಹೈಸೊಡ್ಲೂರು ಜಾಗಕ್ಕೆ ಸಂಬAಧಿಸಿದAತೆ ಪೊಲೀಸರು ಪರಿಶಿಷ್ಟ ಜಾತಿ ಪಂಗಡಗಳ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಕೆಲವರಿಂದ ಇಂತಹ ಕಾಯ್ದೆಯು ದುರ್ಬಳಕೆ ಯಾಗುತ್ತಿದೆ. ಕೂಡಲೇ ಇವರ ಮೇಲಿರುವ ಪ್ರಕರಣ ಕೈ ಬಿಡಬೇಕು ಹಾಗೂ ಕೂಲಂಕುಷವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ವಿವಾದದ ಜಾಗದಲ್ಲಿರುವ ರೈತರು ಈಗಾಗಲೇ ಸಂಬAಧಿಸಿದ ಕಂದಾಯ ಇಲಾಖೆಯಲ್ಲಿ ಜಾಗ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನಷ್ಟೆ ಜಾಗಕ್ಕೆ ಮಂಜೂರಾತಿ ಸಿಗಬೇಕಾಗಿದೆ. ಆದರೆ ತೋಟಕ್ಕೆ ಬೇಲಿ ಹಾಕುವ ಸಂದರ್ಭದಲ್ಲಿ ಅಲ್ಲಿದ್ದ ಕಾರ್ಮಿಕರು ತೋಟದ ಮಾಲೀಕರನ್ನು ಏಕಾಏಕಿ ಪ್ರಶ್ನಿಸಿ ಬೇಲಿಯನ್ನು ಕಿತ್ತಿದ್ದಾರೆ. ಈ ಬಗ್ಗೆ ಯಾವುದೇ ಕ್ರಮ ಜರುಗಲಿಲ್ಲ. ಕೂಡಲೇ ಇವರ ಮೇಲೆ ಕ್ರಮಕೈಗೊಳ್ಳಲು ಆಗ್ರಹಿಸಿದರು.
ಅಲ್ಲದೇ ಇಲ್ಲಿ ವಾಸವಿರುವ ಜನರು ಮೂಲತಃ ಹುದಿಕೇರಿ ಗ್ರಾಮ ಪಂಚಾಯಿತಿಗೆ ಸೇರಿದ ಜನರಲ್ಲ. ಹೀಗಾಗಿ ಜಾಗ ಮಂಜೂರಾತಿಗೆ ಅರ್ಜಿ ಸಲ್ಲಿಸಿದವರಿಗೆ ಜಾಗ ಮಂಜೂರುಗೊಳಿಸಲು ತಹಶೀಲ್ದಾರ್ ಕ್ರಮಕೈಗೊಳ್ಳಲಿ, ಸೂಕ್ತ ದಾಖಲೆ ಇರುವವರಿಗೆ ಮಾತ್ರ ನಿವೇಶನ ನೀಡಬೇಕು, ಸ್ಥಳಿಯರಿಗಷ್ಟೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.
ಯಾವುದೇ ಕಾರಣಕ್ಕೂ ಅಮಾಯಕ ರೈತರ ಮೇಲೆ ದಾಖಲಿಸಿ ರುವ ಮೊಕದ್ದಮೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಕುಟ್ಟ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ, ವೀರಾಜಪೇಟೆ ಸಬ್‌ಇನ್ಸ್ಪೆಕ್ಟರ್ ಶ್ರೀಧರ್, ಗೋಣಿಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ಜಯರಾಂ ಮಾತನಾಡಿ ಅರ್ಜಿದಾರರು ನೀಡಿದ ದೂರನ್ನು ಆದರಿಸಿ ಪ್ರಕರಣ ದಾಖಲು ಮಾಡಲಾಗಿದೆ. ಮುಂದೆ ತನಿಖಾ ಅಧಿಕಾರಿಗಳು ಈ ಬಗ್ಗೆ ಕೂಲಂಕುಷ ತನಿಖೆ ನಡೆಸಲಿದ್ದಾರೆ. ಅಗತ್ಯವಿದ್ದಲ್ಲಿ ಕಾನೂನು ಪ್ರಕಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಈ ವೇಳೆ ಪೊಲೀಸರ ಮಾತಿಗೆ ತೃಪ್ತರಾಗದ ಪ್ರತಿಭಟನಾಕಾರರು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟುಹಿಡಿದರು. ಇಬ್ಬರ ನಡುವೆ ಮಾತಿನ ವಾಗ್ಯುದ್ದ ನಡೆಯಿತು.
ಅಮಾಯಕರ ಮೇಲೆ ಹಾಕಿರುವ ಮೊಕದ್ದಮೆ ವಾಪಾಸು ಪಡೆಯದೆ ಇಲ್ಲಿಂದ ಕದಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ಈ ವೇಳೆ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಎದುರಾಯಿತು. ಮೊಕದ್ದಮೆ ಎದುರಿಸುತ್ತಿದ್ದ ೮ ಮಂದಿ ರೈತರನ್ನು ಸ್ಥಳಕ್ಕೆ ಬರಮಾಡಿಕೊಂಡು ಸುದೀರ್ಘ ವಿಚಾರ ವಿನಿಮಯ ನಡೆಸಿದರು.
ಪ್ರಕರಣಕ್ಕೆ ಸಂಬAಧಿಸಿದAತೆ ರೈತರ ಯಾವುದೇ ತಪ್ಪು ಇಲ್ಲದಿರುವುದನ್ನು ಖಾತರಿಪಡಿಸಿ ಕೊಂಡ ರೈತ ಮುಖಂಡರು ಸ್ಥಳಕ್ಕೆ ಆಗಮಿಸಿದ ಮಡಿಕೇರಿ ವಿಭಾಗದ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಅವರೊಂದಿಗೆ ಚರ್ಚೆ ನಡೆಸಿದರು.
ಅಮಾಯಕ ರೈತರ ಮೇಲಿನ ಪ್ರಕರಣ ಕೈ ಬಿಡಲು ಮನವಿ ಮಾಡಿದರು. ರೈತ ಮುಖಂಡರ ಪ್ರಶ್ನೆಗಳಿಗೆ ಉತ್ತರಿಸಿದ ಡಿವೈಎಸ್ಪಿ ತನಿಖೆಯನ್ನು ಕೂಲಂಕುಷವಾಗಿ ನಡೆಸುತ್ತೇವೆ, ಇದರಲ್ಲಿ ಅನುಮಾನ ಬೇಡ ಇರುವ ಸಾಕ್ಷಿಯ ಮೇಲೆ ಮುಂದೆ ವಿಚಾರಣೆ ನಡೆಯಲಿದೆ ಎಂದು ಭರವಸೆ ನೀಡಿದರು.
ರೈತರು ತಮ್ಮ ಕಾಫಿ ತೋಟಕ್ಕೆ ತೆರಳಲು ಕಾರ್ಮಿಕರಿಂದ ತೊಂದರೆ ಆಗದಂತೆ ಕ್ರಮಕೈಗೊಳ್ಳಲು ಮನುಸೋಮಯ್ಯ ಅಧಿಕಾರಿಗಳಿಗೆ ತಿಳಿಸಿದರು. ಈ ಬಗ್ಗೆ ಕ್ರಮವಹಿಸು ವುದಾಗಿ ಪ್ರತಿ ದಿನ ಪೊಲೀಸರು ಸ್ಥಳಕ್ಕೆ ಭೇಟಿ ನೀಡುತ್ತಾರೆ ಎಂದರು.
ಮೊಕದ್ದಮೆ ದಾಖಲಿಸಿದ ನಂತರ ಸತ್ಯಾಸತ್ಯತೆ ಪರಿಶೀಲನೆ ನಡೆಸದೆ ಯಾರನ್ನೂ ಪೊಲೀಸರು ಬಂಧಿಸುವ ಪ್ರಕ್ರಿಯೆ ಇಲಾಖೆಯಲ್ಲಿ ಇಲ್ಲ ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದರು.
ಜಿಲ್ಲಾ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ರೈತ ಸಂಘದ ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲAಡ ಸೂರಜ್, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಹಾಗೂ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬುಲಿರ ಹರೀಶ್, ಹೊಟ್ಟೆಂಗಡ ರಮೇಶ್ ಪ್ರಸ್ತುತ ವ್ಯವಸ್ಥೆಯನ್ನು ತೀವ್ರವಾಗಿ ಖಂಡಿಸಿದರು.
ಪ್ರತಿಭಟನೆಯಲ್ಲಿ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ, ಬಾಳೆಲೆ ಅಧ್ಯಕ್ಷ ತಾಣಚ್ಚಿರ ಲೇಹರ್ ಬಿದ್ದಪ್ಪ, ಮುಖಂಡರಾದ ಮೀದೇರಿರ ಕವಿತ ರಾಮು, ತೀತರಮಾಡ ರಾಜ, ಚೊಟ್ಟೆಕಾಳಪಂಡ ಮನು, ಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಚೆಕ್ಕೆರ ಚಂದ್ರಪ್ರಕಾಶ್ ಉಪಾಧ್ಯಕ್ಷ ಕೋಡಂಗAಡ ದಮಯಂತಿ, ಸದಸ್ಯರಾದ ಸತೀಶ್, ವಾಸು ಬಿದ್ದಪ್ಪ, ಸೇರಿದಂತೆ ಅನೇಕ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಶ್ರೀಮಂಗಲ, ಪೊನ್ನಂಪೇಟೆ, ಗೋಣಿಕೊಪ್ಪ, ಕುಟ್ಟ ಠಾಣೆಯ ಸಬ್‌ಇನ್ಸ್ಪೆಕ್ಟರ್‌ಗಳಾದ ರವಿಶಂಕರ್, ಡಿ.ಕುಮಾರ್, ಸುಬ್ಬಯ್ಯ, ಚಂದ್ರಪ್ಪ ಸೇರಿದಂತೆ ಅನೇಕ ಪೋಲಿಸ್ ಸಿಬ್ಬಂದಿಗಳು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು.
-ಹೆಚ್.ಕೆ. ಜಗದೀಶ್