ಶನಿವಾರಸಂತೆ, ಜ. ೧೭: ಜಿಲ್ಲೆಯ ಕೃಷಿಕರಿಂದ ಒಣ ಹುಲ್ಲು ಖರೀದಿಸಿ ಹೊರ ಜಿಲ್ಲೆಗೆ ನಿರ್ಬಂಧ ವಿಧಿಸಿ ಬೇಸಿಗೆಯಲ್ಲಿ ಜಾನುವಾರುಗಳಿಗೆ ಅಗತ್ಯವಿರುವ ಮೇವನ್ನು ಜಿಲ್ಲಾಡಳಿತ ಸಂಗ್ರಹಿಸಬೇಕು ಎಂದು ಕೊಡ್ಲಿಪೇಟೆಯ ಬಿಜೆಪಿ ಕೃಷಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಡಿ. ಭಗವಾನ್ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿದ ಅವರು, ಜಿಲ್ಲೆಯಲ್ಲಿ ಹೈನುಗಾರಿಕೆ ಪ್ರಗತಿ ಕಾಣುತ್ತಿದ್ದು, ಕೋವಿಡ್‌ನಿಂದ ಉದ್ಯೋಗ ಕಳೆದುಕೊಂಡವರು, ಭೂರಹಿತರು, ಸಣ್ಣ ಹಿಡುವಳಿದಾರರು, ಮಹಿಳೆಯರು, ಯುವಕೃಷಿಕರು ಜೀವನ ನಿರ್ವಹಣೆಗೆ ಪಶು ಸಂಗೋಪನೆ ಕೈಗೊಂಡಿದ್ದಾರೆ. ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳ ಮಾರಾಟದಿಂದ ಬದುಕು ಕಟ್ಟಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬೇಸಾಯ ಹವಾಮಾನ ವೈಪರಿತ್ಯ ಹಾಗೂ ಇನ್ನಿತರ ಕಾರಣಗಳಿಂದ ಕ್ಷೀಣಗೊಂಡಿದೆ. ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿದೆ. ಭತ್ತದ ಪೈರು ಕರಗಿಹೋಗಿದೆ. ಯಂತ್ರದಲ್ಲಿ ಕಟಾವು ಮಾಡಿದ್ದರಿಂದ ಒಣಹುಲ್ಲು ಗದ್ದೆಯಲ್ಲೇ ಪೋಲಾಗುತ್ತಿದೆ. ಇದರಿಂದ ಮುಂಬರುವ ಬೇಸಿಗೆಯಲ್ಲಿ ಜಾನುವಾರುಗಳ ಮೇವಿಗೆ ಅಭಾವ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿರುವ ಅವರು ಈ ಸಲಹೆ ನೀಡಿದ್ದಾರೆ.