ವೀರಾಜಪೇಟೆ, ಜ. ೧೭: ಕೊಡಗಿನ ಕಾಂಗ್ರೆಸ್ ಮುಖಂಡ ಬಿ.ಟಿ ಪ್ರದೀಪ್ ಅವರ ಐದನೇ ವರ್ಷದ ಸ್ಮರಣಾರ್ಥ ಅಂಗವಾಗಿ ಇಂದು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ ಮಾತನಾಡಿ, ಬಿ.ಟಿ ಪ್ರದೀಪ್ ಅವರ ಗುಣನಡತೆ ಜನತೆಗೆ ಮೆಚ್ಚುಗೆಯಾಗಿತ್ತು. ಅವರ ಆದರ್ಶ ಗುಣ ಎಲ್ಲರಿಗೂ ಮಾದರಿ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ ರಾಜೇಶ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಬಿ.ಟಿ ಪ್ರದೀಪ್ ಅವರ ನೆನಪಿನಲ್ಲಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು. ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ ಮೋಹನ್, ದಿ. ಬಿ.ಟಿ. ಪ್ರದೀಪ್ ಓರ್ವ ಸಜ್ಜನ ರಾಜಕಾರಣಿ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯರುಗಳಾದ ಪೃಥ್ವಿನಾಥ್ ಸಿ.ಕೆ, ಮೊಹಮ್ಮದ್ ರಾಫಿ, ಅಗಸ್ಟಿನ್ ಬೆನ್ನಿ, ಹಿರಿಯ ಕಾಂಗ್ರೆಸ್ ಮುಖಂಡರಾದ ಎಂ.ಎಸ್ ಪೂವಯ್ಯ ಹಾಗೂ ಕಾರ್ಯಕರ್ತರು ಹಾಜರಿದ್ದರು.