ಮಡಿಕೇರಿ ಜ.೧೬ : ಹುಲಿ ಮತ್ತು ಕಾಡಾನೆ ದಾಳಿ ತಡೆಗೆ ಶಾಶ್ವತ ಯೋಜನೆ ರೂಪಿಸಿ ಅನುಷ್ಠಾನ ಗೊಳಿಸುವ ಕುರಿತು ಲಿಖಿತ ರೂಪದಲ್ಲಿ ಸೂಕ್ತ ಭರವಸೆ ನೀಡದಿದ್ದಲ್ಲಿ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಹಾಗೂ ಮಡಿಕೇರಿ ನಗರಾಧ್ಯಕ್ಷ ಕೆ.ಜಿ. ಪೀಟರ್ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಸಂಜೆ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ನಲ್ವತೇಕರೆ ಯುವಕ ಆಶಿಕ್‌ನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಸಂತಾಪ ಸೂಚಿಸಿದ ನಂತರ ಮಾತನಾಡಿದ ಅವರು ಅರಣ್ಯ ಇಲಾಖೆಯ ನಿರ್ಲಕ್ಷö್ಯದಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ ಎಂದು ಆರೋಪಿಸಿದರು.

ಮುಂದಿನ ೧೫ ದಿನಗಳಲ್ಲಿ ಶಾಶ್ವತ ಯೋಜನೆಯ ಕುರಿತು ಭರವಸೆ ದೊರೆಯದಿದ್ದಲ್ಲಿ ಜಿಲ್ಲೆಯ ಕೃಷಿಕರು ಹಾಗೂ ಕಾರ್ಮಿಕರನ್ನು ಒಗ್ಗೂಡಿಸಿ ಕಾಂಗ್ರೆಸ್ ಪಕ್ಷದಿಂದ ಅರಣ್ಯ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.