ಮಡಿಕೇರಿ, ಜ. ೧೬: ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳ ಕಾರ್ಯಕಲಾಪದಲ್ಲಿ ತಾ. ೧೭ ರಿಂದ (ಇಂದಿನಿAದ) ಮಹತ್ತರ ಬದಲಾವಣೆ ಮಾಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯಗಳು, ವಿಚಾರಣಾ ನ್ಯಾಯಾಲಯ(ಕೌಟುಂಬಿಕ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯ, ಸಣ್ಣ ಕಾರಣಗಳ ನ್ಯಾಯಾಲಯ ಮತ್ತು ಔದ್ಯಮಿಕ ಟ್ರಿಬಿನಲ್ ಒಳಗೊಂಡAತೆ)ಗಳ ಕಾರ್ಯಕಲಾಪವನ್ನು ನಡೆಸುವ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯವು, ನೂತನ ಪ್ರಮಾಣಿತ ಕಾರ್ಯಾಚರಣೆಯ ವಿಧಾನ(ಎಸ್.ಓ.ಪಿ)ವನ್ನು ಹೊರಡಿಸಿದೆ. ಮುಂದಿನ ಆದೇಶದವರೆಗೆ ಸದರಿ ಎಸ್.ಓ.ಪಿ.ಯ ಅಧಿಸೂಚನೆ ಜಾರಿಯಲ್ಲಿರುತ್ತದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.

ತುರ್ತು ಪ್ರಕರಣಗಳ ವಿಚಾರಣೆ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕರಣಗಳನ್ನು ಮಾತ್ರ ಈ ಅವಧಿಯಲ್ಲಿ ಪರಿಗಣಿಸಲಾಗುವುದು. ತುರ್ತು ಪ್ರಕರಣಗಳು ಅಲ್ಲದ ವಿಚಾರಣೆಗಳು ಈ ಅವಧಿಯಲ್ಲಿ ನಡೆಯುವುದಿಲ್ಲ. ಕಕ್ಷಿದಾರರು ತಮ್ಮ ವಕೀಲರ ಸಂಪರ್ಕದೊAದಿಗೆ ಈ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಇವು ಅಲ್ಲದೆ ಅನಗತ್ಯವಾಗಿ ಜನರು ನ್ಯಾಯಾಲಯಕ್ಕೆ ಆಗಮಿಸುವುದನ್ನು ತಡೆಯುವ ಜವಾಬ್ದಾರಿ ಆಯಾ ವಕೀಲರು, ವಕೀಲರ ಸಂಘದ್ದಾಗಿರುತ್ತದೆ ಎಂದು ಸೂಚಿಸಲಾಗಿದೆ.

ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ಹೆಚ್ಚಿನ ಕ್ರಮ ಅನುಸರಿಸಲು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ಅಧಿಕಾರವನ್ನು ನೀಡಲಾಗಿದೆ.