ಮಡಿಕೇರಿ, ಜ.೧೩: ಕೋವಿಡ್ ಸೋಂಕು ನಿಯಂತ್ರಣದಲ್ಲಿರುವ ಕೊಡಗು ಜಿಲ್ಲೆಯಲ್ಲಿ ವೀಕೆಂಡ್ ಲಾಕ್ ಡೌನ್ ಕೈಬಿಡಬೇಕೆಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ವೀಕೆಂಡ್ ಲಾಕ್ ಡೌನ್ ನಿಂದ ವರ್ತಕರು ಸಂಪೂರ್ಣ ನಷ್ಟವನ್ನು ಅನುಭವಿಸುತ್ತಿದ್ದಾರೆ. ಕೋವಿಡ್ ಸಾವಿಗಿಂತ ಹೆಚ್ಚಾಗಿ ಸಾಲ ಮತ್ತು ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದು, ಸರಕಾರ ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.೨ ನ್ನು ಮೀರುತ್ತಿಲ್ಲ, ಅಲ್ಲದೆ ಹೊಸ ಸೋಂಕಿತರ ಸಂಖ್ಯೆಯೂ ಏರಿಕೆಯಾಗುತ್ತಿಲ್ಲ. ಇಲ್ಲಿನ ಜನರು ಪ್ರಜ್ಞಾವಂತರಾಗಿದ್ದು, ವ್ಯಾಕ್ಸಿನ್ ವಿತರಣೆಯಲ್ಲೂ ಶೇ.೧೦೦ ರಷ್ಟು ಸಾಧನೆಯಾಗಿದೆ. ಹೀಗಿದ್ದರೂ ಕೊಡಗಿಗೂ ಅನ್ವಯವಾಗುಂತೆ ವೀಕೆಂಡ್ ಲಾಕ್ ಡೌನ್ ಮಾರ್ಗಸೂಚಿ ಹೊರಡಿಸಿರುವುದು ಸರಿಯಾದ ಕ್ರಮವಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.
ದಿನಸಿ ಅಂಗಡಿ, ಮಾಂಸ, ಮೀನು, ಹೊಟೇಲ್, ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ, ಆದರೆ ಜನರು ಮನೆಯಿಂದ ಹೊರಗೆ ಬರಬಾರದು ಎಂದು ನಿರ್ಬಂಧ ಹೇರಲಾಗಿದೆ. ಜನರೇ ಬಾರದೆ ವ್ಯಾಪಾರ ಆಗುವುದಾದರು ಹೇಗೆ ಎಂದು ಪ್ರಶ್ನಿಸಿರುವ ನವೀನ್, ಕೊಡಗಿನ ಮಟ್ಟಿಗೆ ಲಾಕ್ ಡೌನ್ ಕೈಬಿಡುವುದು ಸೂಕ್ತವೆಂದು ತಿಳಿಸಿದ್ದಾರೆ.
ವ್ಯಾಪಾರವಿಲ್ಲದೆ ಹೊಟೇಲ್ ಗಳಲ್ಲಿ ತಯಾರಿಸಿದ ಪದಾರ್ಥಗಳು ಹಾಳಾಗುತ್ತಿವೆ, ಮೀನು, ಮಾಂಸ, ತರಕಾರಿಗಳನ್ನು ಬಿಸಾಡುವ ಪರಿಸ್ಥಿತಿ ಬಂದೊದಗಿದೆ. ಬ್ಯಾಂಕ್ ಗಳಿಗೆ ಸಾಲದ ಕಂತು ಪಾವತಿಸಲಾಗದೆ ವ್ಯಾಪಾರೋದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಟೋ, ಟ್ಯಾಕ್ಸಿ ಚಾಲಕರು ಬಾಡಿಗೆ ಇಲ್ಲದೆ ನಿತ್ಯ ಬಳಕೆಯ ವಸ್ತುಗಳನ್ನು ಕೊಳ್ಳುವುದಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಫಿ ಮತ್ತು ಭತ್ತದ ಕೊಯ್ಲು ಸಮಯವಾಗಿರುವುದರಿಂದ ಕಾರ್ಮಿಕರ ಕೊರತೆಯಿಂದ ಕೃಷಿಕರಿಗೂ ನಷ್ಟವಾಗುತ್ತಿದೆ. ಇನ್ನು ೪ ತಿಂಗಳಿನಲ್ಲಿ ಮಳೆಗಾಲವೂ ಆರಂಭವಾಗಲಿದ್ದು, ವ್ಯಾಪಾರವೇ ಇಲ್ಲದೆ ವರ್ತಕ ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆಗಳಿದೆ. ವ್ಯಾಪಾರ ಮಳಿಗೆ ಮತ್ತು ಹೊಟೇಲ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸಂಬಳ ನೀಡಲು ಕೂಡ ಅಸಾಧ್ಯವಾಗಿದ್ದು, ಯುವ ಸಮೂಹ ಉದ್ಯೋಗ ಕಳೆದುಕೊಳ್ಳುವುದು ನಿಶ್ಚಿತವಾಗಿದೆ ಎಂದು ನವೀನ್ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ತೀವ್ರ ತಪಾಸಣೆಯನ್ನು ನಡೆಸಬೇಕು ಮತ್ತು ಜಿಲ್ಲೆಯಾದ್ಯಂತ ಕೋವಿಡ್ ಮಾರ್ಗಸೂಚಿ ಪಾಲಿಸುವುದನ್ನು ಕಡ್ಡಾಯಗೊಳಿಸಬೇಕು. ಆ ಮೂಲಕ ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸಬೇಕೆ ಹೊರತು ವೀಕೆಂಡ್ ಲಾಕ್ ಡೌನ್ ಹೆಸರಿನಲ್ಲಿ ಜನರ ಓಡಾಟವನ್ನೇ ನಿರ್ಬಂಧಿಸಿ ವ್ಯಾಪಾರ, ವಹಿವಾಟಿಗೆ ಅಡ್ಡಿಪಡಿಸುವುದು ಸರಿಯಲ್ಲ. ಸರಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಹಾಗೂ ಜಿಲ್ಲೆ ಸಹಜ ಸ್ಥಿತಿಯಲ್ಲಿದೆ ಎಂದು ಜಿಲ್ಲಾಡಳಿತ ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕೆಂದು ನವೀನ್ ಒತ್ತಾಯಿಸಿದ್ದಾರೆ.