ಸಿದ್ದಾಪುರ, ಜ. ೧೨: ಅಮ್ಮತ್ತಿ ಸಿದ್ದಾಪುರ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗಿದೆ. ವಾಹನಗಳು ಹಾಳಾಗುತ್ತಿದ್ದು ರಸ್ತೆ ಕಾಮಗಾರಿ ಯಾಕಾಗಿ ಮಾಡುತ್ತಿಲ್ಲ ಎಂದು ಪಿಡಬ್ಲುö್ಯಡಿ ಅಭಿಯಂತರರನ್ನು ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಗ್ರಾಮಸಭೆಯಲ್ಲಿ ನಡೆಯಿತು.
ಅಮ್ಮತ್ತಿ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯು ಗ್ರಾ.ಪಂ ಅಧ್ಯಕ್ಷೆ ವೈ ಜಾನು ಅಧ್ಯಕ್ಷತೆಯಲ್ಲಿ ಗ್ರಾ. ಪಂ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಅಮ್ಮತ್ತಿ ವ್ಯಾಪ್ತಿಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು ಸೇರಿದಂತೆ ಸಾರ್ವಜನಿಕರು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ಕಳೆದ ವರ್ಷ ಗುಂಡಿ ಮುಚ್ಚುವ ಹೆಸರಿನಲ್ಲಿ ೧೨ ಲಕ್ಷದಷ್ಟು ಹಣ ಪೋಲು ಮಾಡಲಾಗಿದೆ ಎಂದು ಗ್ರಾಮಸ್ಥ ಪ್ರಜಿತ್ ಪಿಡಬ್ಲೂ ಇಲಾಖೆಯ ಅಧಿಕಾರಿ ರಾಜು ಅವರನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ೧೫ ದಿನಗಳ ಒಳಗೆ ರಸ್ತೆ ಕಾಮಗಾರಿ ಮಾಡದಿದ್ದರೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಇಲಾಖೆಗೆ ಎಚ್ಚರಿಕೆ ನೀಡಿ ನಿರ್ಣಯ ಕೈಗೊಳ್ಳಲಾಯಿತು. ಪಿಡಬ್ಲೂ ಇಲಾಖಾ ಅಭಿಯಂತರ ರಾಜು ಮಾತನಾಡಿ ತಾವು ಇತ್ತೀಚೆಗೆ ಈ ಭಾಗಕ್ಕೆ ನಿಯೋಜನೆಗೊಂಡಿದ್ದು ಗುಂಡಿ ಮುಚ್ಚಿದ ಬಗ್ಗೆ ಮಾಹಿತಿ ಇಲ್ಲ. ಹಾಳಾದ ರಸ್ತೆ ಸರಿಪಡಿಸುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ರಸ್ತೆ ದುರಸ್ತಿ ಪಡಿಸಲಾಗುವುದು ಎಂದರು.
ಈ ಭಾಗದಲ್ಲಿ ಕಾಡಾನೆ ಉಪಟಳದಿಂದ ಫಸಲು ಆಸ್ತಿ ನಷ್ಟವಾಗುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆ ನಿಷ್ಕಿçಯವಾಗಿದೆ ಎಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಾಡಾನೆಗಳು ಅರಣ್ಯದಲ್ಲಿ ಇರುವುದಕ್ಕಿಂತ ಹೆಚ್ಚಾಗಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು ರೈತರಿಗೆ ಉಪಟಳ ನೀಡುತ್ತಿದ್ದು, ಅರಣ್ಯ ಇಲಾಖೆ ಕಾಟಾಚಾರಕ್ಕೆ ಆನೆ ಓಡಿಸುವ ಕಾರ್ಯ ಮಾಡುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಯಾಕೆ ಮಾಡುತ್ತಿಲ್ಲ ಆನೆ ದಾಳಿಯಿಂದ ಜನರು ಸತ್ತರೆ ಚೆಕ್ ಕೊಟ್ಟು ತೆರಳುವುದಲ್ಲದೆ ಅವುಗಳ ಉಪಟಳ ತಡೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ತಾವು ಬೆಳೆದ ಬೆಳೆಗಳನ್ನು ನಾಶ ಪಡಿಸಿದರೂ ನಮಗೆ ಪರಿಹಾರ ಸಿಗುತ್ತಿಲ್ಲ. ಪರಿಹಾರಕ್ಕೆ ಅರ್ಜಿ ಹಾಕಿ ವರ್ಷ ಕಳೆದರು ಯಾವುದೇ ಪರಿಹಾರ ನೀಡಿಲ್ಲ ಎಂದು ಗ್ರಾಮಸ್ಥ ಪ್ರಜಿತ್ ಆರೋಪಿಸಿದರು. ಸದಸ್ಯ ಪ್ರಶಾಂತ್ ಮಾತನಾಡಿ ಕಳೆದ ಎರಡು ವರ್ಷಗಳ ಹಿಂದೆ ಶಾಲಾ ವಿದ್ಯಾರ್ಥಿನಿ ಮೇಲೆ ಆನೆ ದಾಳಿಯಾದರು ಅವರಿಗೆ ಪರಿಹಾರ ನೀಡಿಲ್ಲ. ಇಲಾಖೆ ನಮ್ಮನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣಲಾಗುತ್ತಿದೆ ಎಂದರು. ಅರಣ್ಯ ಇಲಾಖಾಧಿಕಾರಿ ಮಾತನಾಡಿ ನಾವು ಆನೆಗಳನ್ನು ಸಾಧ್ಯವಾದಷ್ಟು ಕಾಡಿಗೆ ಅಟ್ಟುತ್ತಿದ್ದೇವೆ ಇದಕ್ಕೆ ಶಾಶ್ವತ ಪರಿಹಾರ ಇಲ್ಲ ಎಂದರು. ಇದರಿಂದ ಸಭೆಯಲ್ಲಿ ಕೆಲಸಮಯ ಗೊಂದಲವುAಟಾಯಿತು ಹಾಗೂ ಇದನ್ನು ಚುನಾಯಿತ ಪ್ರತಿನಿಧಿಗಳ ಬಳಿ ಹೇಳುವಂತೆ ಸಲಹೆ ನೀಡಿದರು. ಇಲಾಖೆಯಿಂದ ನೀಡುವ ಎಲ್ಲಾ ಸಹಕಾರ ನೀಡಲಾಗುತ್ತಿದೆ ಎಂದರು.
ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಈ ಭಾಗದಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು ಪೊಲೀಸ್ ಇಲಾಖೆಗೆ ದೂರು ನೀಡಿದರೂ ಇದುವರೆಗೂ ಕಳ್ಳರ ಪತ್ತೆಯಾಗಿಲ್ಲ ಎಂದು ಪ್ರಶಾಂತ್ ಪ್ರಶ್ನಿಸಿದರು. ಈ ಬಗ್ಗೆ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು ಪ್ರಜಿತ್ ಮಾತನಾಡಿ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಈ ಹಿಂದೆ ಕೇರಳದಿಂದ ಕೋವಿಡ್ ವರದಿ ಇಲ್ಲದೆ ಬಂದ ಒಂದು ಟೆಂಪೋ ಗಾಡಿಯ ಬಗ್ಗೆ ಅಮ್ಮತ್ತಿ ಕೋವಿಡ್ ಗೇಟಿನಲ್ಲಿ ಪತ್ತೆ ಹಚ್ಚಿದಾಗ ವೀರಾಜಪೇಟೆ ಪೊಲೀಸ್ ಅಧಿಕಾರಿ ಅಂದು ಅವರನ್ನು ಕರೆದುಕೊಂಡು ಹೋಗಿ ನಂತರ ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟು ಕಳುಹಿಸಿದ್ದಾರೆ.
ಆ ಪೊಲೀಸ್ ಅಧಿಕಾರಿಯ ವಿರುದ್ಧ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡು ಉನ್ನತ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಕಳುಹಿಸಿಕೊಡುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನೋಡಲ್ ಅಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಚೆಲುವರಾಜು ಕಾರ್ಯನಿರ್ವಹಿಸಿದರು. ಪಿಡಿಓ ಮೇದಪ್ಪ ಗ್ರಾ. ಪಂ ಸದಸ್ಯರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು ಇದ್ದರು.