ಕಣಿವೆ, ಜ. ೧೨ : ಮಂಗಳವಾರ ರಾತ್ರಿ ಸಿದ್ದಲಿಂಗಪುರದ ಸುಳ್ಯಕೋಡಿ ಚೆಂಗಪ್ಪ ಎಂಬವರ ಮನೆಯಂಗಳಕ್ಕೆ ಧಾವಿಸಿರುವ ಐದು ಕಾಡಾನೆಗಳಿದ್ದ ಹಿಂಡು ಮನೆಯಂಗಳದಲ್ಲಿ ಚೀಲಕ್ಕೆ ತುಂಬಿಸಿ ಇಟ್ಟಿದ್ದ ಐದು ಚೀಲ ಭತ್ತ, ಹಾಗೂ ಕಾಫಿ ಪಲ್ಪಿಂಗ್‌ಗೆAದು ಹಣ್ಣು ಕಟಾವು ಮಾಡಿ ಚೀಲದಲ್ಲಿಟ್ಟಿದ್ದ ಆರು ಚೀಲ ಕಾಫಿ ಹಣ್ಣಿನ ಚೀಲಗಳನ್ನು ಎಳೆದಾಡಿ ತಿಂದು ಸಾಕಷ್ಟು ಹಾನಿ ಮಾಡಿವೆ.
ಮಧ್ಯರಾತ್ರಿ ಒಂದು ಗಂಟೆಯ ಸಮಯದಲ್ಲಿ ಮನೆಯಂಗಳದ ಗೂಡಿನಲ್ಲಿ ಗೀಳಿಡುತ್ತಿದ್ದ ಶ್ವಾನವನ್ನು ಗಮನಿಸಲು ಹಾಸಿಗೆಯಿಂದ ಎದ್ದು ಹಿಂಬದಿಯ ಬಾಗಿಲಿನಿಂದ ಹೊರ ತೆರಳಿದ ರೈತ ಚೆಂಗಪ್ಪ ಮನೆಯಂಗಳದಲ್ಲಿದ್ದ ಕಾಡಾನೆಗಳ ಹಿಂಡು ಕಂಡು ದಂಗಾಗಿದ್ದಾರೆ. ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಚೀಲದ ಮೇಲೆ ಚೀಲಗಳನ್ನು ಒಟ್ಟಿದ್ದ ಕಾಫಿ ಫಸಲು ಹಾಗೂ ಭತ್ತದ ಚೀಲಗಳ ಬಳಿ ನಿಲ್ಲಿಸಿದ್ದ ಗೂಡ್ಸ್ ಆಟೋವೊಂದನ್ನು ಸೊಂಡಿಲಿನಿAದ ಮುಂದೆ ತಳ್ಳಿ ಬಿಸಾಕಿರುವ ಕಾಡಾನೆಗಳು ಫಸಲು ತಿಂದು - ತುಳಿದು ತೋಟದ ಮೂಲಕ. ಕಾಡಿಗೆ ಮರಳುವಾಗ ಇದೇ ರೈತ ಚೆಂಗಪ್ಪ ಅವರಿಗೆ ಸೇರಿದ ೩೦ ಬಾಳೆಮರ, ೫೦ ಕಾಫಿ ಗಿಡಗಳನ್ನು ತುಳಿದು ತಿಂದು ಧ್ವಂಸ ಗೊಳಿಸಿವೆ.
ಇದರಿಂದಾಗಿ ರೈತ ಚೆಂಗಪ್ಪನಿಗೆ ೫೦ ಸಾವಿರಕ್ಕೂ ಅಧಿಕ ಹಣ ನಷ್ಟವಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಡಿ.ರವಿಕುಮಾರ್ ಹಾಗೂ ಬಾಣಾವರದ ಅರಣ್ಯಾಧಿಕಾರಿಗಳು ಆಗಮಿಸಿ ಬಂದು ಪರಿಶೀಲನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ರವಿಕುಮಾರ್, ಕಾಡಾನೆಗಳು ತೋಟಕ್ಕೆ ಬರುವುದು ಸಾಮಾನ್ಯ. ಆದರೆ ಇದೀಗ ಮನೆಯಂಗಳಕ್ಕೂ ಬರಲು ಆರಂಭಿಸಿವೆ. ಕಾಡಾನೆಗಳಿಂದ ನಮಗೆ ಸೂಕ್ತ ರಕ್ಷಣೆ ನೀಡಬೇಕು. ಕಾಡಾನೆಗಳು ಬರದಂತೆ ಇಲಾಖೆ ಎಚ್ಚರಿಕೆ ವಹಿಸುವ ಮೂಲಕ ರೈತರ ಬೆಳೆ ಹಾಗೂ ರೈತರ ಬದುಕನ್ನು ಉಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ಕಾಡಾನೆ ಹಿಂಡು ಬಾಣಾವರ ಅರಣ್ಯಕ್ಕೆ ಮರಳುವ ಮಾರ್ಗ ಮಧ್ಯೆ ಬೊಮ್ಮೇಟಿ ವೆಂಕಟೇಶ್ ಅವರ ಮನೆಯಂಗಳಕ್ಕೂ ಧಾವಿಸಿ ಅವರು ರಾಶಿ ಹಾಕಿದ್ದ ಸಿಹಿಗೆಣಸನ್ನು ತಿಂದು ಚೀಲವನ್ನು ಎಸೆದು ಹಾನಿ ಮಾಡಿವೆ. ಹಾಗೆಯೇ ಸೂರ್ತಲೆ ದಯಾನಂದ ಎಂಬವರ ಕಾಫಿ ತೋಟದಲ್ಲಿ ನೂರಕ್ಕು ಅಧಿಕ ಸಂಖ್ಯೆಯ ಕಾಫಿ ಗಿಡಗಳನ್ನು ಧ್ವಂಸ ಮಾಡಿ ತೆರಳಿವೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ನೊಂದ ರೈತರು ದೂರು ನೀಡಿದ್ದಾರೆ.