ವೀರಾಜಪೇಟೆ, ಜ. ೧೩: ರಾತ್ರಿ ಹೊತ್ತಿನಲ್ಲಿ ದರೋಡೆಗೆ ಯತ್ನಿಸುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ಮಲ್ಲಿಮಟ್ಟಂ ಗ್ರಾಮದ ನಿವಾಸಿ ಪೆರುಮಾಳ್ ಎಂಬವರ ಪುತ್ರ ಶಕ್ತಿವೇಲ್ (೨೩) ದರೋಡೆಗೆ ಯತ್ನಿಸಿ ಬಂಧನಕ್ಕೊಳಗಾದ ವ್ಯಕ್ತಿ.
ಕದನೂರು ಗ್ರಾಮದ ನಿವಾಸಿ ಮಾಜಿ ಸೈನಿಕ ಅಮ್ಮಣಿಚಂಡ ಎನ್. ಉತ್ತಪ್ಪ ಅವರ ಮನೆಯ ಮುಂದೆ ತಾ. ೧೨ರ ರಾತ್ರಿ ಸುಮಾರು ೧೧ ಗಂಟೆ ವೇಳೆಗೆ ದ್ವಿಚಕ್ರ ವಾಹನವೊಂದು ಬಂದು ನಿಂತಿದ್ದು ಶಬ್ಧ ಕೇಳಿ ಗಾಢ ನಿದ್ರೆಯಲ್ಲಿದ್ದ ಉತ್ತಪ್ಪ ಅವರು ಎಚ್ಚರಗೊಂಡು ಮನೆಯ ಹೊರ ಬಂದು ನೋಡಿದಾಗ ಮನೆಯ ಗೇಟಿನ ಬಳಿ ಅಪರಿಚಿತನೊಬ್ಬ ಕೈಯಲ್ಲಿ ಕಬ್ಬಿಣದ ಸಲಾಕೆ ಹಿಡಿದು ನಿಂತಿರುವ ದೃಶ್ಯ ಎದುರಾಗಿದೆ. ಗಾಬರಿಗೊಂಡ ಉತ್ತಪ್ಪ ಅವರು ಹತ್ತಿರ ತೆರಳಿದ್ದಾರೆ. ಈ ವೇಳೆ ಆ ವ್ಯಕ್ತಿ ಹಲ್ಲೆಗೆ ಮುಂದಾಗಿದ್ದಾನೆ. ಉತ್ತಪ್ಪ ಅವರು ಜೋರಾಗಿ ಕಿರುಚಿಕೊಂಡಿದ್ದು, ನೆರೆಕರೆಯವರು ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ಹಿಡಿದಿದ್ದಾರೆ. ನಂತರ ಪೊಲೀಸ್ ಸಹಾಯವಾಣಿ ೧೧೨ಗೆ ಕರೆ ಮಾಡಲಾಗಿದೆ. ಬಳಿಕ ದೂರು ದಾಖಲಾಗಿದ್ದು, ಇಂದು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಉತ್ತಪ್ಪ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಶಕ್ತಿವೇಲ್‌ನನ್ನು ಬಂಧಿಸಿದ್ದಾರೆ. -ಕೆ.ಕೆ.ಎಸ್.