ಕಣಿವೆ, ಜ. ೧೨ : ಕಾಡಾನೆಗಳು ನಿಶ್ಚಿಂತೆಯಿAದ ಅತ್ತಿಂದಿತ್ತ - ಇತ್ತಿಂದತ್ತ ಅಡ್ಡಾಡುತ್ತಾ ಜೀವಿಸುತ್ತಿದ್ದ ಜಾಗಕ್ಕೆ ಮನುಷ್ಯ ಪ್ರವೇಶ ಮಾಡಿದ್ದಾನೆಯೇ ಹೊರತು, ಮನುಷ್ಯರಿದ್ದ ಜಾಗಕ್ಕೆ ಕಾಡಾನೆಗಳು ಬಂದಿಲ್ಲ. ಅಂದರೆ ಅವುಗಳ ಆವಾಸಸ್ಥಾನ ಇಂದು ಮನುಷ್ಯನ ದುರಾಸೆಗೆ ಬಲಿಯಾಗಿದೆ. ಹಾಗಾಗಿ ಕಾಡಿನೊಳಗೆ ಕಾಡಾನೆಗಳಿಗೆ ಬೇಕಿದ್ದ ಆಹಾರದ ಮೂಲವಾದ ಸೊಪ್ಪು - ಸೆದೆಗಳು, ಮರದ ತೊಗಟೆಗಳು ಮತ್ತು ಹುಲ್ಲುಗಾವಲು ಇಂದು ಅದೃಶ್ಯವಾಗಿದೆ.

ಮನುಷ್ಯ ಮನೆ ಕಟ್ಟಲು ಕಾಡಿನಲ್ಲಿನ ಮರಗಳನ್ನು ಕಡಿದು ಬರಿದು ಮಾಡಿದ. ಇನ್ನು ಕಾಡಂಚಿನ ಕಾಡಿನೊಳಗಿದ್ದ ಹುಲ್ಲುಗಾವಲಿಗೂ ತಾನು ಸಾಕಿದ ಆಡು - ಕುರಿ, ಜಾನುವಾರುಗಳನ್ನು ಮೇಯಲು ಬಿಟ್ಟ.

ಹಾಗಾಗಿ ಸಹಜವಾಗಿಯೇ ತನ್ನದಾಗಿದ್ದ ಎಲ್ಲವನ್ನು ಬರಿದು ಮಾಡಿದ ಮೇಲೆ ನಿನ್ನದೇನನ್ನು ನಾವು ಉಳಿಸಲ್ಲವೆಂದು ಪಣ ತೊಟ್ಟ ಕಾಡಾನೆಗಳು ಮನುಷ್ಯನ ಇರುವಿಕೆಯತ್ತ ದಾಂಗುಡಿಯಿಡುತ್ತಿವೆ.

ಸಣ್ಣ ಹೊಟ್ಟೆಯ ಮನುಷ್ಯ ತನ್ನಲ್ಲಿ ಇದ್ದದ್ದು ಸಾಲದು ಎಂದು ದುರಾಸೆಪಟ್ಟು ಕಾಡಿನತ್ತ ಹೆಜ್ಜೆ ಇಟ್ಟ. ಇದರಿಂದಾಗಿ ದಿಕ್ಕೆಟ್ಟ ಕಾಡಾನೆಗಳು ಕಾಡಿನಂಚಿನ ಹೊಲ ಗದ್ದೆ ತೋಟಗಳಿಗೆ ಎಲ್ಲೆಂದರಲ್ಲಿ ಧಾಳಿ ಇಟ್ಟು ತಮ್ಮ ಪ್ರತೀಕಾರ ತೀರಿಸಿಕೊಳ್ಳುತ್ತಿವೆ.

ಕಾಡಾನೆಗಳು ವಾಸವಿರುವ ಯಾವುದೇ ಅರಣ್ಯ ಪ್ರದೇಶಗಳನ್ನು ತೆಗೆದುಕೊಂಡರೂ ಕೂಡ ಅಲ್ಲಿ ಕಾಡಾನೆಗಳ ಹೊಟ್ಟೆ ತುಂಬುವAತಹ ಆಹಾರದ ಮೂಲಗಳು ಇಲ್ಲ. ಕುಡಿವ ನೀರು ಮೊದಲೇ ಇಲ್ಲ.

ಹಾಗಾಗಿ ಹಗಲು ದಿನವಿಡೀ ಆಹಾರ ಹಾಗೂ ನೀರಿಗಾಗಿ ಕಾದು ಕಾದು ಪರಿತಪಿಸುವ ಕಾಡಾನೆಗಳು ಸೂರ್ಯಾಸ್ತಮಾನವಾಗುವುದನ್ನೇ ಎದುರು ನೋಡುತ್ತಾ ಕಾಡಂಚಿನ ಗಿಡ ಮರ ಪೊದೆಗಳ ಬಳಿ ಬಂದು ಹವಣಿಸುತ್ತಿರುತ್ತವೆ. ಬಳಿಕ ಕತ್ತಲು ಆವರಿಸಿದೊಡನೆ ಕೃಷಿಕರು ಬೆಳೆಸಿದ ಕೃಷಿ ಫಸಲಿನತ್ತ ಧಾಳಿಗೆ ಮುಂದಾಗುತ್ತಿವೆ.

ಆದರೆ..., ಕಾಡಾನೆಗಳು ಆಹಾರ ನೀರಿಗಾಗಿ ಅದು ಎಷ್ಟೇ ಹಾಹಾಕಾರ ಪಟ್ಟರೂ ಕೂಡ ಅವುಗಳು ಎಂದಿಗೂ ಶಿಸ್ತು ಸಡಿಲಿಸುವುದಿಲ್ಲ.

ಮನುಷ್ಯರಾದ ನಮಗೆ ಕ್ರೂರಿಗಳಾಗಿ ಕಾಡಾನೆಗಳು ಅಥವಾ ಇತರೇ ವನ್ಯಮೃಗಗಳು ಕಾಣುವಂತೆಯೇ, ನಾವು ಕೂಡ ಅವುಗಳ ಪಾಲಿಗೆ ಕ್ರೂರಿಗಳೇ ಆಗಿದ್ದೇವೆ. ಏಕೆಂದರೆ ನಾವು ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಕಾಡಾನೆಗಳು ತಿನ್ನದಂತೆ ಒಂದೆಡೆ ಮರಗಳ ಮೇಲೆ ಗುಡಿಸಲು ಮಾಡಿ ರಾತ್ರಿ ಕಾವಲು ಕಾಯುವ ಮೂಲಕ ಭಾರೀ ಎಚ್ಚರ ವಹಿಸುತ್ತೇವೆ. ಇನ್ನೊಂದೆಡೆ ಕಾಡಾನೆಗಳ ಸದ್ದು ಕೇಳಿದರೆ ಸಾಕು ಪಟಾಕಿ ಸಿಡಿ ಮದ್ದುಗಳನ್ನು ಸಿಡಿಸಿ ಅವುಗಳ ಜೀವಕ್ಕೆ ಹಾನಿಪಡಿಸುವಂತಹ ಪ್ರಯತ್ನವನ್ನೂ ಕೂಡ ನಾವು ಮಾಡುತ್ತೇವೆ. ಆದರೆ ಈ ಎಲ್ಲಾ ತಂತ್ರ ಹಾಗೂ ಷಡ್ಯಂತ್ರಗಳನ್ನು ಎದುರಿಸಲು ಮೊದಲೇ ಕಾಡಿನೊಳಗೆಯೇ ಗುಂಪು ಗೂಡಿ ಚರ್ಚೆ ನಡೆಸಿದ ಮಾದರಿಯಲ್ಲೇ ಕಾಡಿನೊಳಗಿಂದ ಹೊರ ತೆರಳುವ ಕಾಡಾನೆಗಳು ಒಂದರ ಹಿಂದೆ ಒಂದರAತೆ ಶಿಸ್ತಿನಿಂದ ತೆರಳುವುದನ್ನು ನೋಡುವುದೇ ಒಂದು ಚೆಂದ.

ಅದರಲ್ಲೂ ಮರಿಗಳು ಇದ್ದರಂತೂ ಅವುಗಳ ಲಾಲನೆ ಹಾಗೂ ಪಾಲನೆಯ ಹೊಣೆ ಗುಂಪಿನಲ್ಲಿನ ಹಿರಿಯ ಆನೆಗಿರುತ್ತದೆ. ಹಾಗಾಗಿ ಅದು ತಂಡದ ನೇತೃತ್ವವನ್ನು ವಹಿಸಿ ಸುತ್ತಲ ಮಾನವ ಪರಿಸರದ ಸೂಕ್ಷ್ಮತೆಗಳನ್ನು ಗಮನಿಸಿಯೇ ಅತ್ತಾ ಇತ್ತಾ ದೃಷ್ಟಿ ಹರಿಸಿ ಮುಂದೆ ಸಾಗುವ ಪರಿ ನೋಡೋದಕ್ಕೆ ವಿಸ್ಮಯವೇ ಸರಿ.

ಆಹಾರ ನೀರು ಸಿಗದೇ ನರಕ

ಕೆಲವೊಂದು ವೇಳೆ ಕಾಡಿನಿಂದ ಆಹಾರ ನೀರು ಅರಸಿ ನಾಡಿನತ್ತ ಧಾವಿಸುವ ಕಾಡಾನೆಗಳ ಹಿಂಡನ್ನು ಕಾಡಂಚಿನ ಕೃಷಿಕರು ಅಥವಾ ಅರಣ್ಯ ಇಲಾಖೆ ಸಿಬ್ಬಂದಿಗಳು ಸಾಮೂಹಿಕವಾಗಿ ಎದುರಿಸಿ ಕಾಡಿಗೆ ಮರಳಿಸುವ ಸಂದರ್ಭ ಮೊದಲೇ ಹಸಿವಿನಿಂದ ಕಂಗೆಟ್ಟ ಕಾಡಾನೆಗಳು ಮನುಷ್ಯರ ಗಲಾಟೆ - ಗದ್ದಲ, ಅರಣ್ಯ ಇಲಾಖೆ ಸಿಬ್ಬಂದಿಗಳು ಇವುಗಳನ್ನು ಬೆದರಿಸಲು ಗಾಳಿಯಲ್ಲಿ ಹಾರಿಸುವ ಗಾಳಿ ಗುಂಡಿನ ಸಪ್ಪಳಕ್ಕೆ ಗಲಿ ಬಿಲಿ ಗೊಂಡು ನಿತ್ರಾಣಗೊಂಡು ಕಾಡಿಗೆ ಮರಳುವ ಸ್ಥಿತಿಯಂತೂ ನೋಡುಗರಿಗೆ ಮರುಕ ಹುಟ್ಟಿಸುತ್ತದೆ.

ಇಂತಹ ಅನೇಕ ಪ್ರಸಂಗಗಳನ್ನು ಕಣ್ಣಾರೆ ಕಂಡಿರುವ ಅತ್ತೂರಿನ ಕಾಡಂಚಿನ ಕೃಷಿಕ ನರೇಂದ್ರ ಮಣಿ ಎಂಬವರು, ಅಯ್ಯೋ ಅರ್ಧ ಕೆಜಿ ಆಹಾರಕ್ಕೆ ಇನ್ನೊಬ್ಬರ ಮನೆ ಹಾಳು ಮಾಡಿ ಬದುಕುವ ಮನುಷ್ಯರಿರುವಾಗ ನೂರಾರು ಕೆಜಿ ಆಹಾರ ಬೇಕಿರುವ ದೊಡ್ಡ ಹೊಟ್ಟೆಯ ಕಾಡಾನೆಗಳು ಇನ್ನು ಬದುಕುವುದಾದರೂ ಹೇಗೆ ಹೇಳಿ ಎನ್ನುತ್ತಾರೆ.

ಈ ಭೂಮಿಯ ಮೇಲೆ ಬದುಕಲು ಮನುಷ್ಯರಿಗೆ ಇರುವಷ್ಟೇ ಪ್ರಾಣಿಗಳಿಗೂ ಹಕ್ಕು ಇದೆ. ಅವುಗಳ ಸ್ಥಿತಿ - ಗತಿಗಳನ್ನು ನಾವು ನೋಡಿಕೊಂಡು ಬದುಕಬೇಕಲ್ಲವೇ..? ತಿನ್ನಲಿ ಬಿಡಿ. ನಾವು ಬೆಳೆವ ಭೂ ತಾಯಿ ಕೊಡುವ ಫಲವನ್ನು ಅವುಗಳೂ ಒಂದಷ್ಟು ತಿನ್ನಲಿ ಬಿಡಿ. ನಾನಂತು ನನ್ನ ತೋಟದಲ್ಲಿ ಕಾಡಾನೆಗಳು ತಿಂದು ತುಳಿದು ಉಳಿಸಿದ್ದರಲ್ಲೇ ತೃಪ್ತಿ ಪಡುತ್ತಿದ್ದೇನೆ ಎಂದು ಬೇಸರಿಸದೇ ಹೇಳುವ ಮೂಲಕ ಪ್ರಾಣಿ ಪ್ರೀತಿ ತೋರಿಸುತ್ತಾರೆ ನರೇಂದ್ರ.

ಕಳೆದ ಮೂರು ವರ್ಷಗಳ ಈಚೆಗೆ ಜಗವನ್ನು ಕಾಡುತ್ತಿರುವ ಮಾರಕ ರೋಗಗಳು, ಅತಿವೃಷ್ಟಿ, ಜಲಪ್ರಳಯ, ಭೂಕಂಪಗಳು ಮಾನವನ ದುರಾಸೆಯಿಂದಾಗಿಯೇ ಸಂಭವಿಸುತ್ತಿವೆ. ಎಷ್ಟೆಲ್ಲಾ ಇದ್ದರೂ ಕೂಡ, ಇನ್ನೂ ಬೇಕು. ಮತ್ತಷ್ಟೂ ಬೇಕು ಎಂದು ನಿಸರ್ಗವನ್ನೆಲ್ಲಾ ಲೂಟಿ ಮಾಡಿ ಭೂ ಸಂಪತ್ತು ಅಗೆದು - ಬಗೆದು, ಮರಗಳನ್ನು ಕಡಿದುರುಳಿಸಿ ಪರಿಸರದ ಅಸಮತೋಲನಕ್ಕೆ ಕಾರಣನಾದ ಮನುಷ್ಯನ ಮುಂದೆ ಈ ಕಾಡಾನೆಗಳು ಹಾಗೂ ಕಾಡು ಪ್ರಾಣಿಗಳೇ ವಾಸಿ ಎನ್ನುವ ಇವರು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ತಿನ್ನುವ ಒಂದಿಷ್ಟು ಅನ್ನ ಹಾಗೂ ನೀರಿಗೆ ಮನುಷ್ಯರು ಕೂಡ ಕುಟುಂಬ ಸದಸ್ಯರನ್ನು ಕಟ್ಟಿಕೊಂಡು ಅಲೆಯುವ ಸ್ಥಿತಿ ಬಂದರೂ ಅಚ್ಚರಿಪಡುವಂತಿಲ್ಲ ಎನ್ನುತ್ತಾರೆ.

ಕಾಡಾನೆಗಳ ಹಸಿವು ನೀಗಿಸಲು ಅರಣ್ಯ ಇಲಾಖೆ ಆಹಾರದ ಗಿಡ ಮರಗಳನ್ನು ನೆಟ್ಟು ಬೆಳೆಸಿ ಪೋಷಿಸಬೇಕಿದೆ. ಹಾಗೆಯೇ ಅರಣ್ಯದೊಳಗೆ ಕೆರೆ ಕಟ್ಟೆಗಳನ್ನು ನಿರ್ಮಿಸಿ ಕುಡಿಯುವ ನೀರಿನ ದಾಹ ನೀಗಿಸಬೇಕಿದೆ. ಜೊತೆಗೆ ಅರಣ್ಯದೊಳ ಭಾಗಕ್ಕೆ ಜಾನುವಾರುಗಳು ಹಾಗೂ ಮಾನವರು ಬಾರದಂತೆ, ಕಾಡಾನೆಗಳು ಹೊರ ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂಬುದು ಪ್ರಾಣಿ ಪ್ರಿಯರ ವಾದವಾಗಿದೆ.

- ಕೆ.ಎಸ್. ಮೂರ್ತಿ.