ಸೋಮವಾರಪೇಟೆ, ಜ. ೧೩: ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೂಲಕ ತಾಲೂಕಿನ ತೋಳೂರುಶೆಟ್ಟಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ವಸತಿ ಶಾಲೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ಸುಮಾರು ೨೫ ಕೋಟಿ ವೆಚ್ಚದಲ್ಲಿ ಈ ಶಿಕ್ಷಣ ಸಂಸ್ಥೆ ತಲೆ ಎತ್ತುತ್ತಿದ್ದು, ನೀಲನಕ್ಷೆಯಂತೆ ಯೋಜನೆ ಪೂರ್ಣಗೊಂಡರೆ ಜಿಲ್ಲೆಯಲ್ಲಿಯೇ ದೊಡ್ಡದಾದ ವಸತಿ ಶಾಲೆ ಎಂಬ ಹೆಗ್ಗಳಿಕೆಗೆ ಭಾಜನವಾಗಲಿದೆ.

ಕೊಡಗಿಗೆ ೨ ವಸತಿ ಶಾಲೆ: ೨೦೧೮ರ ಬಜೆಟ್‌ನಲ್ಲಿ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ನಿರ್ಮಾಣಕ್ಕೆ ಸರ್ಕಾರ ಅನುದಾನ ಮೀಸಲಿರಿಸಿದ್ದು, ಇದರಲ್ಲಿ ಕೊಡಗಿಗೆ ೨ ವಸತಿ ಶಾಲೆಗಳನ್ನು ಮಂಜೂರು ಮಾಡಿತ್ತು. ನಾಪೋಕ್ಲುವಿನಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದರೂ ಜಾಗದ ಸಮಸ್ಯೆಯಿಂದಾಗಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಇದೀಗ ನಾಪೋಕ್ಲುವಿನಲ್ಲಿ ಅಂಬೇಡ್ಕರ್ ಶಾಲೆಯ ತಳಪಾಯ ಕಾಮಗಾರಿ ಆರಂಭವಾಗಿದ್ದರೆ, ಸೋಮವಾರಪೇಟೆಗೆ ಮಂಜೂರಾದ ಶಾಲೆಗೆ ಈಗಾಗಲೇ ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.

೨೫೦ ವಿದ್ಯಾರ್ಥಿಗಳಿಗೆ ಅವಕಾಶ: ತೋಳೂರುಶೆಟ್ಟಳ್ಳಿಯಲ್ಲಿ ರೂ. ೨೫.೨೧ ಕೋಟಿ ವೆಚ್ಚದಲ್ಲಿ ಬೃಹತ್ ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಎನ್‌ಎಸ್‌ಎಲ್ ಕನ್‌ಸ್ಟçಕ್ಷನ್ ಸಂಸ್ಥೆ ಟೆಂಡರ್ ಪಡೆದುಕೊಂಡಿದ್ದು, ಸುಮಾರು ೮ ಎಕರೆ ಪ್ರದೇಶದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ತಲೆ ಎತ್ತುತ್ತಿದೆ. ಇದರಲ್ಲಿ ೨೫೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬಹುದಾಗಿದೆ.

ತೋಳೂರುಶೆಟ್ಟಳ್ಳಿಯಲ್ಲಿ ಸ್ಥಳೀಯ ದಾನಿಗಳು ನೀಡಿದ ಜಾಗದಲ್ಲಿ ಪ್ರಾರಂಭವಾಗಿದ್ದ ಪ್ರಸಾದ ಪ್ರೌಢಶಾಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಶಾಲೆಯನ್ನು ಮುಚ್ಚಲಾಗಿತ್ತು. ಇದನ್ನು ಆದಿಚುಂಚನಗಿರಿ ಮಠಕ್ಕೆ ನೀಡುವ ಬಗ್ಗೆಯೂ ಒಂದಿಷ್ಟು ಪ್ರಯತ್ನಗಳು ನಡೆದಿದ್ದವು.

ಕೆಲವೊಂದು ಗೊಂದಲಗಳಿAದ ಮಠದ ಬದಲಿಗೆ ಸರ್ಕಾರದ ಸ್ವತ್ತಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಂಬೇಡ್ಕರ್ ವಸತಿ ಶಾಲೆಗೆ ಜಾಗವನ್ನು ನೀಡಿರುವದರಿಂದ ಬೃಹತ್ ವಸತಿ ಶಾಲೆ ಆರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಎರಡು ಅಂತಸ್ತಿನ ಕಟ್ಟಡಗಳ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಮಳೆಗಾಲ ಹಾಗೂ ಅಕಾಲಿಕ ಮಳೆಯಿಂದಾಗಿ ಕಾಮಗಾರಿಯ ವೇಗಕ್ಕೆ ತಡೆಯಾಗಿತ್ತು. ಇದೀಗ ಮಳೆ ನಿಂತಿದ್ದು, ಕಾಮಗಾರಿಯೂ ಚುರುಕು ಪಡೆಯುತ್ತಿದೆ.

ಬೃಹತ್ ಕಟ್ಟಡಗಳ ನಿರ್ಮಾಣ: ನೀಲನಕ್ಷೆಯ ಪ್ರಕಾರ ೫೯೮೦.೩೩ ಚದರ ಮೀಟರ್‌ನಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಶಾಲಾ ಕಟ್ಟಡ(ನೆಲ ಮತ್ತು ಒಂದನೇ ಅಂತಸ್ತು) ೧೨೦೮.೬೩ ಚದರ ಮೀಟರ್‌ನಲ್ಲಿ ನಿರ್ಮಾಣವಾಗುತ್ತಿದ್ದು, ಇದರಲ್ಲಿ ೫ ಬೋಧನಾ ಕೊಠಡಿ, ೩ ಪ್ರಯೋಗಾಲಯ,

(ಮೊದಲ ಪುಟದಿಂದ) ಗಣಕಯಂತ್ರದ ಕೊಠಡಿ, ಪ್ರಾಂಶುಪಾಲರ ಕೊಠಡಿ, ಸಿಬ್ಬಂದಿ ಕೊಠಡಿ, ೧೨ ಶೌಚಾಲಯಗಳು, ಕಚೇರಿ, ೨ ಉಗ್ರಾಣ, ಗ್ರಂಥಾಲಯ, ಕ್ರೀಡಾ ಕೊಠಡಿ, ವಿವಿಧೋದ್ದೇಶ ಕೊಠಡಿಗಳು ನಿರ್ಮಾಣವಾಗುತ್ತಿವೆ.

೧೨೫ ವಿದ್ಯಾರ್ಥಿಗಳಿಗೆ ಒಂದರAತೆ ೨ ವಿಭಾಗಗಳಲ್ಲಿ ಬಾಲಕಿಯರ ವಸತಿ ನಿಲಯ ನಿರ್ಮಾಣಗೊಳ್ಳಲಿದ್ದು, ಒಂದೊAದು ವಿಭಾಗದಲ್ಲೂ ೯ ವಸತಿ ಕೊಠಡಿ, ಮೇಲ್ವಿಚಾರಕರು ಹಾಗೂ ಪ್ರಥಮ ಚಿಕಿತ್ಸಾ ಕೊಠಡಿ, ೨೧ ಸ್ನಾನ ಗೃಹಗಳು, ೨೪ ಶೌಚಾಲಯ, ಓದುವ ಕೊಠಡಿ/ಗ್ರಂಥಾಲಯ ೧, ಯೋಗ ಕೊಠಡಿ, ಕೈ ತೊಳೆಯುವ ಸ್ಥಳ, ಅಂಗವಿಕಲರ ಸ್ನಾನ ಗೃಹ/ ಶೌಚಾಲಯ, ಸಂದರ್ಶಕರ ಕೊಠಡಿ, ಮನೋರಂಜನಾ ಕೊಠಡಿಗಳ ನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.

ಇನ್ನು ಅಡುಗೆ ಮತ್ತು ಭೋಜನಾಲಯ, ಪ್ರಾಂಶುಪಾಲರ ವಸತಿ ಗೃಹ, ಎರಡು ವಿಭಾಗದಲ್ಲಿ ಬೋಧಕ ಮತ್ತು ಸಿಬ್ಬಂದಿಗಳ ವಸತಿ ಗೃಹ, ಒಂದು ಬೋಧಕೇತರ ಸಿಬ್ಬಂದಿಗಳ ವಸತಿ ಗೃಹಗಳು ನಿರ್ಮಾಣವಾಗುತ್ತಿವೆ. ಇದರೊಂದಿಗೆ ಕೊಳವೆ ಬಾವಿ, ಸೆಪ್ಟಿಕ್ ಟ್ಯಾಂಕ್, ನೀರಿನ ತೊಟ್ಟಿ, ಒಳಚರಂಡಿ, ವಿದ್ಯುತ್ ಸಂಪರ್ಕ, ಭದ್ರತಾ ಸಿಬ್ಬಂದಿ ಕೊಠಡಿ, ಸೋಲಾರ್ ವಾಟರ್ ಹೀಟರ್, ಸೋಲಾರ್ ಬೀದಿ ದೀಪ, ಕಟ್ಟಡದ ವಿದ್ಯುದೀಕರಣ ಕಾಮಗಾರಿಗಳನ್ನು ಯೋಜನೆ ಒಳಗೊಂಡಿದೆ.

ಕಾಮಗಾರಿಗೆ ವೇಗ: ಕಳೆದ ತಾ. ೦೧.೦೧.೨೦೨೧ರಂದು ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದ್ದು, ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ೧೮ ತಿಂಗಳುಗಳ ಕಾಲಾವಧಿ ನೀಡಲಾಗಿದೆ. ಈ ನಡುವೆ ಮಳೆಗಾಲ ಮತ್ತು ಅಕಾಲಿಕ ಮಳೆಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿದ್ದ ಹಿನ್ನೆಲೆ ಇದೀಗ ಕಾಮಗಾರಿಗೆ ವೇಗ ನೀಡಲಾಗಿದ್ದು, ಪಶ್ಚಿಮಬಂಗಾಳ ಹಾಗೂ ಆಂಧ್ರ‍್ರಪ್ರದೇಶದ ೬೦ಕ್ಕೂ ಅಧಿಕ ಕಾರ್ಮಿಕರು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ವಿದ್ಯಾರ್ಥಿಗಳ ಪೆರೇಡ್: ೨೦೨೨ರ ಶೈಕ್ಷಣಿಕ ವರ್ಷವನ್ನು ಇದೇ ಕಟ್ಟಡದಲ್ಲಿ ಪ್ರಾರಂಭಿಸಲು ಪ್ರಯತ್ನ ಸಾಗಿದೆ. ಪ್ರಸ್ತುತ ಸೋಮವಾರಪೇಟೆಯ ಜೂನಿಯರ್ ಕಾಲೇಜಿಗೆ ಸೇರಿದ ಕಟ್ಟಡದಲ್ಲಿ ತರಗತಿಗಳು ಹಾಗೂ ಹಳೆಯ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಸಮುಚ್ಚಯದಲ್ಲಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

೬ ರಿಂದ ೧೦ ನೇ ತರಗತಿವರೆಗೆ ೨೫೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಸತಿ ಹಾಗೂ ತರಗತಿಗಳು ಪ್ರತ್ಯೇಕ ಕಟ್ಟಡಗಳಲ್ಲಿರುವುದರಿಂದ ಪ್ರತಿದಿನ ಬೆಳಿಗ್ಗೆ ವಸತಿ ಗೃಹದಿಂದ ತರಗತಿಗೆ, ಮಧ್ಯಾಹ್ನ ಊಟಕ್ಕೆಂದು ವಸತಿ ಗೃಹಕ್ಕೆ ಆಗಮಿಸಿ ನಂತರ ತರಗತಿಗೆ ಹಾಗೂ ಸಂಜೆ ವಸತಿ ಗೃಹಕ್ಕೆ ಪೆರೇಡ್ ನಡೆಸುವಂತಾಗಿದೆ.

ಉದ್ದೇಶಿತ ಯೋಜನೆ ನಿರೀಕ್ಷಿತ ಸಮಯದಲ್ಲಿ ಪೂರ್ಣಗೊಂಡರೆ ಮುಂದಿನ ಶೈಕ್ಷಣಿಕ ವರ್ಷದಿಂದ ತೋಳೂರುಶೆಟ್ಟಳ್ಳಿಯಲ್ಲಿ ಅಂಬೇಡ್ಕರ್ ವಸತಿ ಶಾಲೆ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ಇಲ್ಲಿ ಶಾಲೆ ಪ್ರಾರಂಭವಾದರೆ ವಿವಿಧ ಭಾಗಗಳ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳ ಓಡಾಟ ಹೆಚ್ಚಾಗಲಿದೆ. ವಾಹನಗಳ ಓಡಾಟವೂ ಹೆಚ್ಚಲಿದ್ದು, ಸ್ಥಳೀಯವಾಗಿ ವ್ಯಾಪಾರ ವಹಿವಾಟು ಚೇತರಿಸಿಕೊಳ್ಳಲಿದೆ. ಇದರೊಂದಿಗೆ ಮೂಲಭೂತ ಸೌಲಭ್ಯಗಳೂ ಒದಗಲಿವೆ ಎಂಬ ಆಶಯ ಈ ಭಾಗದ ಗ್ರಾಮಸ್ಥರಲ್ಲಿದೆ.

- ವಿಜಯ್ ಹಾನಗಲ್