ಮಡಿಕೇರಿ, ಜ. ೧೩: ನಿಶಾನೆ ಮೊಟ್ಟೆಯಲ್ಲಿ ಹರಳು ಕಲ್ಲು ಇರುವದು ಇಪ್ಪತ್ತು ವರ್ಷಗಳ ಹಿಂದೆಯೇ ಬಹಿರಂಗವಾಗಿದೆ. ನಂತರದಲ್ಲಿ ಹಲವು ಬಾರಿ ಅಕ್ರಮ ಗಣಿಗಾರಿಕೆ ಕೂಡ ನಡೆದಿದೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಜಿಲ್ಲಾಡಳಿತದ ಆದೇಶದಂತೆ ಅರಣ್ಯ ಇಲಾಖೆ ಮೂಲಕ ಗಣಿಗಾರಿಕೆ ನಡೆದ ಸ್ಥಳದಲ್ಲಿ ಅರಣ್ಯ ಕ್ಯಾಂಪ್ ನಿರ್ಮಿಸಿ ಅರಣ್ಯ ಇಲಾಖಾ ಸಿಬ್ಬಂದಿಗಳನ್ನೇ ಕಾವಲಿಗೆ ನಿಯೋಜಿಸಲಾಗಿತ್ತು. ಆದರೆ ಕಾವಲಿಗಿದ್ದವರೇ ಕನ್ನ ಹಾಕುತ್ತಾರೆಂದು ಯಾರೂ ಊಹಿಸಿರಲಿಲ್ಲ..! ಅಷ್ಟಕ್ಕೂ ಎಲ್ಲರಿಗೂ ಸರಿಯಾಗಿ (?) ಲಂಚದ ಹಣ ಸಿಕ್ಕಿದ್ದಿದ್ದರೆ.., ಸಹಕಾರ ನೀಡಿದ ಗ್ರಾಮದ ಪ್ರಮುಖರ ಎರಡೂ ಬಣಗಳಿಗೂ ಪಾಲು ಹೋಗಿದ್ದಿದ್ದರೆ ಈ ದಂಧೆ ಬಯಲಿಗೆ ಬರುತ್ತಿರಲಿಲ್ಲ..! ಪಾಲು ಪಂಕ್ತಿ ಸರಿಯಾಗಿಲ್ಲವೆಂದು ದಂಧೆಯನ್ನು ಹೊರ ಜಗತ್ತಿಗೆ ತೇಲಿಬಿಟ್ಟ ಸಿಬ್ಬಂದಿ ಇದೀಗ ಕೆಲಸ ಕಳೆದುಕೊಳ್ಳುವಂತಾಗಿದೆ..! ಜೊತೆಗೆ ಅಕ್ರಮವನ್ನು ಮರೆಮಾಚಿದ ಅಧಿಕಾರಿಯೂ ಮನೆಗೆ ಹೋಗುವಂತಾಗಿದೆ..!

ನಿಶಾನೆ ಮೊಟ್ಟೆಯಲ್ಲಿ ಹರಳು ಕಲ್ಲು ದಂಧೆ ಮತ್ತೆ ನಡೆಯಲು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಸಿಬ್ಬಂದಿಗಳೇ ಪ್ರಮುಖ ಕಾರಣ. ಸ್ಥಳೀಯ ವ್ಯಕ್ತಿ, ಈ ಹಿಂದೆಯೂ ದಂಧೆ ನಡೆಸಿದವರು ಇಲಾಖೆಯವರನ್ನು ‘ಪಾಕೆಟ್’ ಮಾಡಿಕೊಂಡು ದಂಧೆಗಿಳಿದಿದ್ದಾರೆ. ಈ ನಡುವೆ ಮತ್ತೊಂದು ತಂಡ ಕೂಡ ಸಹಕರಿಸುವಂತೆ ಇಲಾಖೆಯವರಿಗೆ ಕಾಣಿಕೆ ನೀಡಿದೆ. ಆದರೆ, ಇಲಾಖೆಯವರು ಹೆಚ್ಚು ಕಾಣಿಕೆ ನೀಡಿದವರಿಗೆ ಮಣೆ ಹಾಕಿದ್ದಾರೆ. ಈ ಹೆಚ್ಚು ಹಣ ಓರ್ವ ಸಿಬ್ಬಂದಿಗೆ ಸಿಕ್ಕಿಲ್ಲ. ಇದರಿಂದಾಗಿ ಅಸಮಾಧಾನಗೊಂಡ ಆ ಸಿಬ್ಬಂದಿ ವಿಚಾರವನ್ನು ಮತ್ತೊಂದು ಬಣಕ್ಕೆ ರವಾನಿಸಿದ್ದಾರೆ. ಇದು ಇಲಾಖಾ ಅಧಿಕಾರಿಗಳ ಗಮನಕ್ಕೆ ಬಂದು ತನಿಖೆಯ ಹಂತಕ್ಕೆ ತಲಪಿ ಇದೀಗ ಇಲಾಖಾ ಅಧಿಕಾರಿಗಳು ಈರ್ವರನ್ನು ಸೇವೆಯಿಂದ ಅಮಾನತ್ತುಗೊಳಿಸಿ, ಇತರ ಸಿಬ್ಬಂದಿಗಳನ್ನು ಬದಲಾವಣೆ ಮಾಡಿದ್ದಾರೆ..!

(ಮೊದಲ ಪುಟದಿಂದ) ಇಲಾಖೆಗೆ ಸುದ್ದಿ ಹೋಗುವಂತೆ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಹಾಗಾಗಿ ಪ್ರಮುಖ ಆರೋಪಿಯಾಗಿಸಿ ಅಮಾನತ್ತು ಮಾಡಲಾಗಿದೆ.

ದಿಕ್ಕು ತಪ್ಪಿಸಿದ ಅಧಿಕಾರಿ..!

ವಿಚಾರ ತಿಳಿದ ಬಳಿಕ ಇಲಾಖೆ ವತಿಯಿಂದ ಸ್ಥಳ ಮಹಜರು ಮಾಡಲು ತೊಡಿಕಾನ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಮೂರ್ತಿ ಅವರು ತೆರಳಿದ್ದರು. ಸ್ಥಳ ಮಹಜರು ಮಾಡಿದ ಅಧಿಕಾರಿ ಕ್ಯಾಂಪ್ ನ ಬಳಿ ಮಣ್ಣಿನ ರಾಶಿ ಮಾತ್ರ ಇರುವದಾಗಿ ವರದಿ ಸಲ್ಲಿಸಿದ್ದರು. ಮೂರು ಬಾರಿ ತೆರಳಿದಾಗಲೂ ಇದೇ ವರದಿ ನೀಡಲಾಗಿತ್ತು. ನಂತರ ಉಪ ಸಂರಕ್ಷಣಾಧಿಕಾರಿ ಪೂವಯ್ಯ ಅವರ ಸೂಚನೆ ಮೇರೆಗೆ ಅರಣ್ಯ ಸಂಚಾರಿ ದಳದ ಉಪ ಸಂರಕ್ಷಣಾಧಿಕಾರಿ ಸೀಮಾ, ಸಹಾಯಕ ಸಂರಕ್ಷಣಾಧಿಕಾರಿ ಶ್ರೀನಿವಾಸ್ ನಾಯಕ್, ಸಿಬ್ಬಂದಿ ಚಂದ್ರೇಶ್ ಅವರುಗಳು ತೆರಳಿ ಪರಿಶೀಲಿಸಿದಾಗ ಕ್ಯಾಂಪ್ ನ ಬಳಿಯಲ್ಲೇ ಹೊಂಡ, ಸುರಂಗ ತೋಡಿರುವದು, ಪಕ್ಕದ ತೋಡಿನಲ್ಲಿ ಗಣಿಗಾರಿಕೆಗೆ ಬೇಕಾದ ಸಾಮಗ್ರಿಗಳನ್ನು ಅವಿತಿಟ್ಟಿರುವದು ಗೋಚರಿಸಿತ್ತು. ಈ ಹಿನ್ನೆಲೆಯಲ್ಲಿ ವಿಚಾರ ತಿಳಿದಿದ್ದರೂ ಪ್ರಕರಣದಲ್ಲಿ ಭಾಗಿಯಾಗಿ ವಿಷಯ ಮರೆ ಮಾಚಿದ ಕಾರಣಕ್ಕಾಗಿ ಮೂರ್ತಿ ಅವರನ್ನೂ ಅಮಾನತ್ತು ಮಾಡಲಾಗಿದೆ..!

ಇನ್ನೂ ಇದ್ದಾರೆ..!

ಗ್ರಾಮಸ್ಥರ ಪ್ರಕಾರ ಇಲ್ಲಿ ‘ಗುಬ್ಬಿ ಮೇಲೆ ಬ್ರಹ್ಮಾಸ್ತç’ ಪ್ರಯೋಗಿಸಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೇವಲ ಇಬ್ಬರು ಸಿಬ್ಬಂದಿಗಳಿAದ ಮಾತ್ರ ಇಷ್ಟೊಂದು ದೊಡ್ಡ ಮಟ್ಟದ ಅಕ್ರಮ ವ್ಯವಹಾರ ನಡೆಯಲು ಸಾಧ್ಯವಿಲ್ಲ., ಇದರಲ್ಲಿ ಅಧಿಕಾರಿಗಳ ಶಾಮಿಲಾತಿ ಕೂಡ ಇದೆ., ಈ ಬಗ್ಗೆಯೂ ತನಿಖೆಯಾಗಬೇಕಿದೆ ಎಂದು ಆಗ್ರಹಿಸಿದ್ದಾರೆ. ತನಿಖೆಯಾದರೆ ಇನ್ನಷ್ಟು ಮಂದಿಯ ಹೆಸರುಗಳು ಹೊರಬರುವದಂತೂ ದಿಟ...!?ಸಂತೋಷ್, ಸುನಿಲ್