ಸೋಮವಾರಪೇಟೆ, ಜ. ೧೩: ಪಟ್ಟಣ ಸಮೀಪದ ಚೌಡ್ಲು ಗ್ರಾಮದಲ್ಲಿರುವ ಖಾಸಗಿ ಶಾಲೆಯ ೭ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಅವರು ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು.

ಸೋಂಕಿತ ವಿದ್ಯಾರ್ಥಿಗಳು ಆರೋಗ್ಯದಿಂದ ಇದ್ದಾರೆ. ಎಲ್‌ಕೆಜಿಯಿಂದ ೪ನೇ ತರಗತಿಯವರೆಗಿನ ವಿದ್ಯಾರ್ಥಿಗಳ ಗಂಟಲು ದ್ರವವನ್ನು ತೆಗೆದು ಪರೀಕ್ಷೆ ಮಾಡಲಾಗುತ್ತದೆ. ೭ ದಿನಗಳ ನಂತರ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ವೆಂಕಟೇಶ್ ಮಾಹಿತಿ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಂದೂಧರ್, ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ಇದ್ದರು.

ಕುಮಾರಳ್ಳಿ ಗ್ರಾಮದಲ್ಲಿರುವ ರೆಸಾರ್ಟ್ನ ೧೦ ಸಿಬ್ಬಂದಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿಗಳಿಗೂ ಸೋಂಕು ತಗುಲಿದೆ. ಕಳೆದ ಮೂರು ದಿನಗಳಿಂದ ಬ್ಯಾಂಕ್ ಮುಚ್ಚಿರುವ ಹಿನ್ನೆಲೆ ಗ್ರಾಹಕರು ಪರದಾಡು ವಂತಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಎಂಟು ಮಂದಿ ಕೋವಿಡ್ ಸೋಂಕಿತರಿದ್ದು, ಮೂರು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪರೀಕ್ಷಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ.