ಪಾಲಿಬೆಟ್ಟ, ಜ. ೧೩: ೨೫ ವರ್ಷಗಳಿಂದ ಕಾಫಿ ಎಸ್ಟೇಟ್ ವೊಂದರಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ಕಾರ್ಮಿಕನ ವಸತಿ ಗೃಹದ ಸುತ್ತ ತೋಟದ ಮಾಲೀಕ ಹೊಂಡ ತೆಗೆದು ಕಾರ್ಮಿಕ ಮತ್ತು ಆತನ ಕುಟುಂಬವನ್ನು ಶೋಷಣೆಗೆ ಒಳಪಡಿಸಿದ ಘಟನೆ ನಡೆದಿದೆ.

ಪಾಲಿಬೆಟ್ಟದ ಖಾಸಗಿ ಎಸ್ಟೇಟ್‌ನಲ್ಲಿ ಈ ಘಟನೆ ನಡೆದಿದ್ದು, ಮಾಲೀಕ ಮನೆಯ ಸುತ್ತ ಕೊರೆದ ಕಂದಕದಿAದ ಕಾರ್ಮಿಕನ ಕುಟುಂಬ ಕಳೆದ ಒಂದು ವಾರದಿಂದ ಮನೆಯಿಂದ ಹೊರಬರಲಾಗದೇ ಮನೆಯೊಳಗೆ ಬಂಧನದಲ್ಲಿದೆ. ಮನೆಯ ಹೊರಬರಲು ಸಾಧ್ಯವಾಗದೇ ಏಣಿಯೊಂದರ ಆಶ್ರಯ ಪಡೆದು ಮನೆಯಿಂದ ಹೊರಗೆ ಬರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ತಾ.೭ರಂದು ವಸತಿ ಗೃಹದಲ್ಲಿ ಕಾರ್ಮಿಕ ಸುಬ್ರಮಣಿ, ಪತ್ನಿ ಅಮುದ ಹಾಗೂ ಪುತ್ರಿ ಅನಿತ ಮನೆಯಲ್ಲಿ ಇದ್ದ ಸಂದರ್ಭ ರಾತ್ರಿಯ ಹೊತ್ತು ಮಾಲೀಕ ಮನೆಯ ಮುಂಬಾಗಿಲು ಹಾಗೂ ಹಿಂಬಾಗಿಲಿಗೆ ಬೀಗ ಹಾಕಿ ಜೆಸಿಬಿ ಯಂತ್ರದ ಮೂಲಕ ಮನೆಯ ಸುತ್ತ ಕಂದಕ ಕೊರೆದು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಮನೆಯ ಹೊಸ್ತಿಲಿನಿಂದಲೇ ಜೆಸಿಬಿ ಯಂತ್ರದ ಮೂಲಕ ಮನೆಯ ಸುತ್ತಲು ಮಣ್ಣು ಕೊರೆದ ಕಾರಣ ಸುಮಾರು ೧೦ ಅಡಿ ಕಂದಕ ನಿರ್ಮಾಣವಾಗಿದ್ದು, ಮನೆಯೂ ಬೀಳುವ ಸ್ಥಿತಿಯಲ್ಲಿದೆ. ಕಂದಕ ಕೊರೆದಿರುವುದರಿಂದ ಮನೆಯೊಳ ಗಿದ್ದವರು

(ಮೊದಲ ಪುಟದಿಂದ) ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಸುಬ್ರಮಣಿಯವರ ಅನಾರೋಗ್ಯದ ಜತೆಗೆ ಪತ್ನಿ ಅಮುದ ಅವರ ಆರೋಗ್ಯವು ಹದಗೆಟ್ಟಿದ್ದು, ಇದುವರೆಗೂ ಅಮುದ ಅವರು ಮನೆಯಿಂದ ಹೊರಬರಲು ಸಾಧ್ಯವಾಗಿಲ್ಲ.

೨೫ ವರ್ಷಗಳಿಂದ ಸುಬ್ರಮಣಿಯವರು ವಾಹನ ಚಾಲಕರಾಗಿ ಕಾಫಿ ತೋಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ತೋಟದ ವಸತಿ ಗೃಹದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಇದೇ ತೋಟದಲ್ಲಿ ಕಳೆದ ಐದು ವರ್ಷಗಳಿಂದ ಮಗಳು ಪವಿತ ಕೂಡ ಸೇವೆ ಸಲ್ಲಿಸುತ್ತಿದ್ದರು. ತಂದೆ, ಮಗಳನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ಸಂದರ್ಭ ಸೇವೆಯನ್ನು ಪರಿಗಣಿಸಿ ಮಾಲೀಕ, ಕಾರ್ಮಿಕನಿಗೆ ಯಾವುದೇ ಭದ್ರತಾ ಹಣ ಸೇರಿದಂತೆ ಇನ್ನಿತರ ಕಾನೂನಾತ್ಮಕ ಸೌಕರ್ಯಗಳನ್ನು ನೀಡದ್ದರಿಂದ ಇದೇ ಕಾರಣವನ್ನು ಮುಂದಿಟ್ಟು ಸುಬ್ರಮಣಿ ಮಾಲೀಕನ ವಿರುದ್ಧ ಕಾನೂನು ಮೊರೆ ಹೋಗಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದರು.

ಕಳೆದ ೬ ವರ್ಷಗಳಿಂದ ಕಾನೂನು ಹೋರಾಟ ನಡೆಯುತ್ತಿದ್ದ ಕಾರಣ ಕಾರ್ಮಿಕ, ಮಾಲೀಕ ನೀಡಿದ ವಸತಿ ಗೃಹದಲ್ಲಿಯೇ ವಾಸ ಮಾಡಿಕೊಂಡಿದ್ದ. ತಾ. ೭ರಂದು ರಾತ್ರಿ ಮಾಲೀಕ ಜೆಸಿಬಿ ಯಂತ್ರದ ಮೂಲಕ ಮನೆಯ ಸುತ್ತಲು ಕಂದಕ ಕೊರೆದಿದ್ದು, ಮನೆಯ ಸಂಪರ್ಕಕ್ಕೆ ನೀರು, ವಿದ್ಯುತ್, ಇನ್ನಿತರ ಸೌಕರ್ಯಗಳನ್ನು ಕಡಿತಗೊಳಿಸಿ ಕಾರ್ಮಿಕನ ಕುಟುಂಬ ಸಂಕಟ ಅನುಭವಿಸುತ್ತಿದೆ. ಘಟನೆಯ ಬಗ್ಗೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಾರ್ಮಿಕರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

- ವರದಿ : ಪುತ್ತಂ ಪ್ರದೀಪ್