ಮಡಿಕೇರಿ, ಜ. ೧೧: ಮುಖ್ಯಮಂತ್ರಿಗಳು ನೀಡಿರುವ ರೂ. ೫೦ ಕೋಟಿ ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡು ಮಡಿಕೇರಿ, ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳಲ್ಲಿ ರಸ್ತೆ, ಚರಂಡಿಗಳ ನಿರ್ಮಾಣ ಸೇರಿದಂತೆ ಪ್ರಗತಿ ಕಾರ್ಯಕ್ಕೆ ಆದ್ಯತೆ ನೀಡುವುದಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು. ಮುಖ್ಯಮಂತ್ರಿಗಳು ರಾಜ್ಯದ ಪ್ರತೀ ಶಾಸಕರ ಕ್ಷೇತ್ರಾಭಿವೃದ್ಧಿಗಾಗಿ ತಲಾ ರೂ. ೫೦ ಕೋಟಿ ಅನುದಾನ ನೀಡಿದ್ದು, ಈ ಪೈಕಿ ತಾನು ಮಡಿಕೇರಿ ನಗರಸಭೆಗೆ ರೂ. ೫ ಕೋಟಿ, ಕುಶಾಲನಗರ ಮತ್ತು ಸೋಮವಾರಪೇಟೆ ಪ.ಪಂ. ಗಳಿಗೆ ತಲಾ ರೂ. ೨.೫೦ ಕೋಟಿ, ಜಿ.ಪಂ.ಗೆ ರೂ. ೨೦ ಕೋಟಿ ಮತ್ತು ಲೋಕೋಪಯೋಗಿ ಇಲಾಖೆಗೆ ರೂ. ೨೦ ಕೋಟಿ ಅನುದಾನ ನೀಡುವುದಾಗಿ ಹೇಳಿದರು.

ಪ್ರತೀ ಜನಪ್ರತಿನಿಧಿಯೂ ತನ್ನ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ಕಾಮಗಾರಿ ಗುಣಮಟ್ಟವನ್ನು ಖುದ್ದಾಗಿ ಪರಿಶೀಲಿಸಿ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಡೆಯುವಂತೆ ಗಮನ ಹರಿಸಬೇಕೆಂದೂ ರಂಜನ್ ಹೇಳಿದರು.

ಹಲವಾರು ವರ್ಷಗಳಿಂದ ಮಡಿಕೇರಿ ನಗರಸಭೆಯ ಸಭೆಗೆ ಹಾಜರಾಗದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಸಕ ರಂಜನ್, ತಾನು ಕಳೆದ ಅವಧಿಯಲ್ಲಿ ಕೆಲವು ಸಭೆಗಳಿಗೆ ಬಂದಿದ್ದೆ. ಆದರೆ ಆ ಸಭೆಗಳಲ್ಲಿ ವೈಯಕ್ತಿಕ ಟೀಕೆಗಳು, ಗೊಂದಲಗಳೇ ಹೆಚ್ಚಾಗಿದ್ದವು. ಹೀಗಾಗಿ ನಂತರ ಸಭೆಗಳಿಂದ ದೂರ ಉಳಿದೆ. ಇದೀಗ ನಗರಸಭೆಯ ಅಧ್ಯಕ್ಷೆ ಅನಿತಾಪೂವಯ್ಯ ಆಹ್ವಾನದ ಮೇರೆಗೆ ನಗರಸಭೆಯ ಸಭೆಯಲ್ಲಿ ಪಾಲ್ಗೊಂಡಿರುವೆ. ಪ್ರತೀ ಶುಕ್ರವಾರ ನಗರಸಭೆಗೆ ಕೆಲಕಾಲ ಬಂದು ಜನರ ಅಹವಾಲು ಸ್ವೀಕರಿಸುವೆ ಎಂದು ಹೇಳಿದರು.

ವೀಕೆಂಡ್ ಕರ್ಫ್ಯೂ

ಕೊಡಗಿನಲ್ಲಿ ವೀಕೆಂಡ್ ಕರ್ಫ್ಯೂ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ರಂಜನ್, ಕೊಡಗಿನಲ್ಲಿ ಕೋವಿಡ್ ಪಾಸಿಟಿವಿಟಿ ದರ ಕಡಿಮೆಯಾಗಿಲ್ಲ. ಹೀಗಾಗಿ ಮುಂದಿನ ಕೆಲವಾರಗಳ ಕಾಲ ವೀಕೆಂಡ್ ಕರ್ಫ್ಯೂ

(ಮೊದಲ ಪುಟದಿಂದ) ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದೆ. ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗುವವರೆಗೂ ಈ ರೀತಿಯ ಕ್ರಮ ಅನಿವಾರ್ಯ. ವೀಕೆಂಡ್ ಕರ್ಫ್ಯೂ ಶನಿವಾರ, ಭಾನುವಾರ ಇರುವುದರಿಂದಾಗಿ ಇದರಿಂದ ಜನರಿಗೆ ಹೆಚ್ಚಿನ ಸಮಸ್ಯೆಯಾಗುವುದಿಲ್ಲ. ಮೊದಲು ಆರೋಗ್ಯ ಕಾಳಜಿ. ನಂತರವೇ ಉಳಿದೆಲ್ಲವೂ ಎಂಬುದನ್ನು ಜಿಲ್ಲೆಯ ಜನತೆ ಮನಗಾಣಬೇಕೆಂದು ಶಾಸಕರು ಹೇಳಿದರು.