ಮಡಿಕೇರಿ, ಜ. ೧೧: ಮಡಿಕೇರಿ ಖಾಸಗಿ ಬಸ್ ನಿಲ್ದಾಣವನ್ನು ಖಾಸಗಿ ನಿರ್ವಹಣೆಗೆ ಒಪ್ಪಿಸಲು ನಗರಸಭೆಯಲ್ಲಿ ತೀರ್ಮಾನಿಸ ಲಾಯಿತು. ಅಂತೆಯೇ ದಾಸವಾಳದಲ್ಲಿನ ನಗರಸಭೆಗೆ ಸೇರಿದ ಉದ್ಯಾನವನ್ನೂ ಖಾಸಗಿ ನಿರ್ವಹಣೆಗೆ ನೀಡಲು ನಿರ್ಧರಿಸಲಾಯಿತಲ್ಲದೇ, ನಿರ್ವಹಣೆ ಕಷ್ಟಸಾಧ್ಯವಾದ ನಗರಸಭೆಯ ೩ ಶಾಲೆಗಳನ್ನೂ ಸರ್ಕಾರಕ್ಕೆ ನೀಡಲು ತೀರ್ಮಾನ ಕೈಗೊಳ್ಳಲಾಯಿತು. ಮಡಿಕೇರಿ ನಗರಸಭಾ ವ್ಯಾಪ್ತಿಯ ರಸ್ತೆ, ಚರಂಡಿ ನಿರ್ಮಾಣಕ್ಕೆ ರೂ. ೫ ಕೋಟಿ ಅನುದಾನ ನೀಡುವುದಾಗಿ ಶಾಸಕ ರಂಜನ್ ಪ್ರಕಟಿಸಿದರು.
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ೩೪ ತಿಂಗಳ ಬಳಿಕ ನಡೆದ ನೂತನ ಆಡಳಿತ ಮಂಡಳಿ ಸಭೆಯಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪಾಲ್ಗೊಂಡು ಅನೇಕ ಸಲಹೆ ಸೂಚನೆ ನೀಡಿದರು. ಮಡಿಕೇರಿ ನಗರ ವ್ಯಾಪ್ತಿಯ ರಸ್ತೆ, ಚರಂಡಿ ನಿರ್ಮಾಣಕ್ಕೆ ಶಾಸಕರ ಅನುದಾನದಿಂದ ರೂ. ೫ ಕೋಟಿ ನೀಡುವುದಾಗಿ ಶಾಸಕ ರಂಜನ್ ಘೋಷಿಸಿದರು. ಪ್ರತಿ ಸದಸ್ಯರೂ ರೂ. ೫ ಲಕ್ಷಕ್ಕೆ ಮೀರದಂತೆ ತಮ್ಮ ವಾರ್ಡ್ ಅಭಿವೃದ್ಧಿಗೆ ಸಂಬAಧಿಸಿದAತೆ ಕ್ರಿಯಾಯೋಜನೆ ಸಲ್ಲಿಸುವಂತೆ ರಂಜನ್ ಸೂಚಿಸಿದರು.
ಬಸ್ ನಿಲ್ದಾಣ ಖಾಸಗಿಯವರಿಗೆ
ನಗರಸಭೆಯ ಅಧೀನದಲ್ಲಿರುವ ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆಗೆ ಸಂಬAಧಿಸಿದAತೆ ನಡೆದ ಚರ್ಚೆಯಲ್ಲಿ ಬಿಜೆಪಿ ಸದಸ್ಯ ಕೆ.ಎಸ್. ರಮೇಶ್ ಮಾತನಾಡಿ, ಹಲವಾರು ಊರುಗಳಲ್ಲಿ ಬಸ್ ನಿಲ್ದಾಣಗಳನ್ನು ಖಾಸಗಿಯವರೇ ನಿರ್ವಹಿಸುತ್ತಿದ್ದಾರೆ. ಮಡಿಕೇರಿಯ ಖಾಸಗಿ ಬಸ್ ನಿಲ್ದಾಣವನ್ನೂ ಕೂಡ ಖಾಸಗಿ ನಿರ್ವಹಣೆಗೆ ಒಪ್ಪಿಸಬಹುದು ಎಂದರು.
ಶಾಸಕ ರಂಜನ್ ಈ ಪ್ರಸ್ತಾವನೆಗೆ ಮೆಚ್ಚುಗೆ ಸೂಚಿಸಿ ಮುಂದಿನ ದಿನಗಳಲ್ಲಿ ಬಸ್ ನಿಲ್ದಾಣವನ್ನು ಖಾಸಗಿಯವರಿಗೆ ನಿರ್ವಹಣೆಗೆ ಒಪ್ಪಿಸುವುದೇ ಸೂಕ್ತ ಎಂದರು. ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆಗಳ ಬಗ್ಗೆ ಸದಸ್ಯರಾದ ಉಮೇಶ್ ಸುಬ್ರಮಣಿ, ಅರುಣ್ ಶೆಟ್ಟಿ, ಅಮೀನ್ ಮೊಹಿಸಿನ್ ಮಾತನಾಡಿ, ಸರಿಯಾದ ವ್ಯವಸ್ಥೆಯೇ ಇಲ್ಲದಂಥ ಸ್ಥಿತಿ ಇದೆ. ಕಳೆದ ಆಡಳಿತಾವಧಿಯಲ್ಲಿ ಮಾರ್ಚ್ ೩೦ ರ ಭಾನುವಾರ ತರಾತುರಿಯಲ್ಲಿ ಕಾಮಗಾರಿಯ ಗುತ್ತಿಗೆದಾರನಿಗೆ ರೂ. ೩ ಕೋಟಿ ಬಾಕಿ ಮೊತ್ತವನ್ನು ನೀಡಲಾಗಿದೆ. ಕಾಮಗಾರಿ ಅತ್ಯಂತ ಕಳಪೆಯಾಗಿದೆ ಎಂದು ದೂರಿದರು. ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಸದಸ್ಯರು ಒತ್ತಾಯಿಸಿದರು.
(ಮೊದಲ ಪುಟದಿಂದ) ಈ ಸಂದರ್ಭ ಮಾತನಾಡಿದ ನಗರಸಭೆಯ ಅಧಿಕಾರಿಗಳು, ೨೦೧೮ ರಲ್ಲಿ ಕಾಮಗಾರಿ ಮುಗಿದಿದ್ದು, ೨ ವರ್ಷಗಳ ನಿರ್ವಹಣಾ ಅವಧಿಯೂ ಮುಗಿದಿದೆ. ಹೀಗಾಗಿ ಕಾನೂನು ರೀತ್ಯ ಕ್ರಮ ಸಾಧ್ಯವಿಲ್ಲ ಎಂದರು.
ಶಾಸಕ ರಂಜನ್ ಸಲಹೆ ನೀಡಿ, ಟೆಂಡರ್ ಪ್ರಕಾರ ಕಾಮಗಾರಿ ನಡೆದಿಲ್ಲ ಎಂದಾದರೆ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಲು ಅವಕಾಶ ಇದೆ; ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಬಸ್ ನಿಲ್ದಾಣ ಕಾಮಗಾರಿ ಕಳಪೆಯಾಗಿದೆ ಎಂಬ ಕಾರಣದಿಂದಲೇ ತಾನು ಬಸ್ ನಿಲ್ದಾಣ ಉದ್ಘಾಟನೆಗೆ ಬರಲಿಲ್ಲ ಎಂದು ಸ್ಮರಿಸಿದರು. ಅಧ್ಯಕ್ಷೆ ಅನಿತಾಪೂವಯ್ಯ, ಕಳಪೆ ಕಾಮಗಾರಿ ನಡೆದಿರುವುದು ಸ್ಪಷ್ಟವಾಗಿದೆ. ಯಾವುದೂ ಸಮರ್ಪಕವಾಗಿಲ್ಲ ಎಂದರು. ಉಪಾಧ್ಯಕ್ಷೆ ಸವಿತಾರಾಕೇಶ್ ಮಾತನಾಡಿ, ಹೆಸರಿಗಷ್ಟೇ ಬಸ್ ನಿಲ್ದಾಣ. ಪ್ರಯಾಣಿಕರಿಗೆ ಕೂರಲೂ ಆಸನಗಳಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ನಗರಸಭೆಗೆ ಮುಂದಿನ ದಿನಗಳಲ್ಲಿ ಬಸ್ ನಿಲ್ದಾಣದ ನಿರ್ವಹಣೆ ಅಸಾಧ್ಯವಾಗಲಿದೆ. ಹೀಗಾಗಿ ಖಾಸಗಿ ನಿರ್ವಹಣೆಗೆ ನೀಡುವುದೇ ಸೂಕ್ತ ಎಂಬ ಸದಸ್ಯ ಕೆ.ಎಸ್. ರಮೇಶ್ ಸಲಹೆಗೆ ಸಭೆs ಒಪ್ಪಿಗೆ ಸೂಚಿಸಿತು.
ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ ಮಾತನಾಡಿ, ಕಳಪೆ ಕಾಮಗಾರಿಗೆ ಗುತ್ತಿಗೆದಾರನಂತೆ ಆಗ ಇದ್ದ ಅಧಿಕಾರಿಗಳು ಕೂಡ ಹೊಣೆಗಾರರಾಗಿದ್ದಾರೆ ಎಂದು ದೂರಿದರು.
ಉದ್ಯಾನ ನಿರ್ವಹಣೆ
ದಾಸವಾಳದಲ್ಲಿರುವ ನಗರಸಭೆ ಉದ್ಯಾನವನ ನಿರ್ವಹಣೆಗೆ ಬ್ರಹ್ಮಕುಮಾರಿ ಈಶ್ವರಿಯ ಸಂಸ್ಥೆಯವರು ಮುಂದೆ ಬಂದಿದ್ದಾರೆ. ಇದರಿಂದಾಗಿ ಉದ್ಯಾನವನ ನಿರ್ವಹಣೆಗಾಗಿ ನಗರಸಭೆಗೆ ರೂ. ೧೫ ಲಕ್ಷ ಉಳಿತಾಯ ಆಗಲಿದೆ ಎಂದು ಸಭೆಗೆ ಅಧ್ಯಕ್ಷೆ ಮಾಹಿತಿ ನೀಡಿದಾಗ ಎಸ್ಡಿಪಿಐ ಸದಸ್ಯ ಮನ್ಸೂರ್ ನಗರಸಭೆಗೆ ಸೇರಿದ ಎಲ್ಲಾ ಜಾಗಗಳನ್ನು ಖಾಸಗಿಯವರ ನಿರ್ವಹಣೆಗೆ ನೀಡಿದರೆ ನಗರಸಭೆಯ ಸದಸ್ಯರಿಗೆ ಜನ ಯಾವ ರೀತಿಯಲ್ಲಿ ಗೌರವ ನೀಡುತ್ತಾರೆ. ನಗರಸಭೆಗೆ ತನ್ನ ಆಸ್ತಿಯನ್ನೇ ನಿರ್ವಹಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಪಂಪಿನಕೆರೆಯ ೬೭ ಎಕರೆ ಜಾಗವನ್ನೂ ಅರಣ್ಯ ಇಲಾಖೆಗೆ ನೀಡಲಾಗಿದೆ. ನಗರಸಭೆಗೆ ಆದಾಯ ನಷ್ಟವಾಗುತ್ತದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಬಿಜೆಪಿ ಸದಸ್ಯರು ಖಾಸಗಿ ನಿರ್ವಹಣೆಗೆ ಉದ್ಯಾನವನ ನೀಡುವುದರಿಂದ ಉತ್ತಮ ರೀತಿಯಲ್ಲಿ ಉದ್ಯಾನವನ ನಿರ್ವಹಿಸಲ್ಪಡುತ್ತದೆ ಎಂದು ವಾದ ಮಂಡಿಸಿದರು.
ಕೆ.ಎಸ್. ರಮೇಶ್ ಪ್ರತಿಕ್ರಿಯಿಸಿ, ಜನರಿಗೆ ಒಳ್ಳೆಯದು ಮಾಡುವುದು ಜನಪ್ರತಿನಿಧಿಗಳಾಗಿ ನಮ್ಮ ಕರ್ತವ್ಯ. ೨೦ ವರ್ಷಗಳಿಂದ ಸದಸ್ಯನಾಗಿ ನಗರಸಭೆಯ ಕಾರ್ಯವೈಖರಿ ಗೊತ್ತಿದೆ. ನಗರಸಭೆಯ ನಿಯಂತ್ರಣದಲ್ಲಿ ಕೆಲವು ಯೋಜನೆಗಳನ್ನು ಖಾಸಗಿಯವರಿಗೆ ನೀಡುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟರು.
ಶಾಲೆಗಳು ಸರಕಾರಕ್ಕೆ
ನಗರಸಭೆಯ ಶಾಲೆಗಳ ಶಿಕ್ಷಕರಿಗೆ ವೇತನ ನೀಡಲಾಗದ ಬಗ್ಗೆ ಚರ್ಚೆ ನಡೆದು ಶಿಕ್ಷಕರಿಗೆ ವೇತನ ನೀಡಲು ನಿಯಮ ಪ್ರಕಾರ ನಗರಸಭೆಯಲ್ಲಿ ಅವಕಾಶ ಇಲ್ಲದಿರುವುದರಿಂದಾಗಿ ಸಮಸ್ಯೆ ಮುಂದುವರೆದಿದೆ ಎಂದು ಅಧ್ಯಕ್ಷೆ ಅನಿತಾ ಪೂವಯ್ಯ ಸಭೆಗೆ ಮಾಹಿತಿ ನೀಡಿದರು.
ಈ ಬಗ್ಗೆ ಸಲಹೆ ನೀಡಿದ ಸದಸ್ಯ ಎಸ್.ಸಿ.ಸತೀಶ್, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಹರಿಸಬೇಕಾದ ಅನಿವಾರ್ಯತೆ ಇದೆ. ಶಾಲೆಗಳಲ್ಲಿ ಪರಿಣಿತ ಶಿಕ್ಷಕರಿಲ್ಲ. ಅನೇಕ ತರಗತಿ ಮಕ್ಕಳನ್ನು ಒಂದೇ ತರಗತಿಯಲ್ಲಿ ಕೂರಿಸಿ ಯಾವ ರೀತಿಯ ಶಿಕ್ಷಣ ನೀಡಲು ಸಾಧ್ಯವಿದೆ. ಹೀಗಾಗಿ ಈ ಶಾಲೆಗಳನ್ನು ಸರ್ಕಾರದ ವಶಕ್ಕೆ ನೀಡುವುದೇ ಸೂಕ್ತ ಎಂದರು.
ಶಾಸಕ ರಂಜನ್ ಪ್ರತಿಕ್ರಿಯಿಸಿ, ಸರ್ಕಾರದಿಂದ ನಗರಸಭಾ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಲು ಸಾಧ್ಯವಿಲ್ಲ. ಈ ಮೂರು ಶಾಲೆಗಳ ಪೋಷಕರ ಸಭೆ ನಡೆಸಿ ಅಭಿಪ್ರಾಯ ಪಡೆದು ಸರ್ಕಾರದ ವಶಕ್ಕೆ ಈ ಶಾಲೆಗಳನ್ನು ನೀಡಿ ಈಗ ಓದುತ್ತಿರುವ ವಿದ್ಯಾರ್ಥಿಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಹತ್ತಿರದ ಶಾಲೆಗಳಿಗೆ ಸೇರಿಸುವುದೇ ಸೂಕ್ತ ಎಂದು ಸಲಹೆ ನೀಡಿದರು.
ನಗರಸಭೆ ಅಧಿಕಾರಿ ತಾಹೀರ್ ಮಾಹಿತಿ ನೀಡಿ, ೧೯೧೮ ರಲ್ಲಿ ಹಿಂದೂಸ್ಥಾನಿ ಶಾಲೆ ನಗರಸಭೆಯ ನಿರ್ವಹಣೆಗೊಳಪಟ್ಟಿದೆ. ಮಹದೇವಪೇಟೆಯ ಎ.ವಿ. ಶಾಲೆ ಕೂಡ ನಗರಸಭೆಯ ನಿರ್ವಹಣೆಯಲ್ಲಿದೆ. ಜಿ.ಟಿ. ರಸ್ತೆಯ ಶಾಲೆಯ ಆಸ್ತಿ ಚರ್ಚ್ಗೆ ಸೇರಿದ್ದಾಗಿದೆ ಎಂದರು.
ಬೀದಿ ಬದಿ ವ್ಯಾಪಾರಿಗಳು ಒಂದೇ ಕಡೆಗೆ
ಬೀದಿ ಬದಿ ವ್ಯಾಪಾರಿಗಳನ್ನು ಮುಂದಿನ ದಿನಗಳಲ್ಲಿ ನಗರದ ಒಂದೇ ಪ್ರದೇಶದಲ್ಲಿ ಸೂಕ್ತ ವ್ಯವಸ್ಥೆಯೊಂದಿಗೆ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅಧ್ಯಕ್ಷೆ ಅನಿತಾ ಮಾಹಿತಿ ನೀಡಿದರು. ಎಸ್.ಡಿ.ಪಿ.ಐ. ಸದಸ್ಯ ಬಶೀರ್ ಪ್ರತಿಕ್ರಿಯಿಸಿ, ಹೀಗೆ ಮಾಡಿದರೆ ದೂರದ ಪ್ರದೇಶಗಳಿಗೆ ಜನ ತೆರಳಲಾಗದೇ ವ್ಯಾಪಾರಿಗಳಿಗೆ ನಷ್ಟ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವ್ಯಾಪಾರಿಗಳ ಬಗ್ಗೆ ನಮಗೂ ಕಾಳಜಿ ಇದೆ. ಅವರ ಒಳಿತಿಗಾಗಿಯೇ ಈ ನಿರ್ಧಾರ ಮಾಡುತ್ತಿದ್ದೇವೆ ಎಂದು ಅಧ್ಯಕ್ಷೆ ಉತ್ತರಿಸಿದರು.
ಅಧಿಕಾರಿಗಳ ವಿರುದ್ಧ ಗರಂ...!
ಸಭೆಯ ಒಂದು ಹಂತದಲ್ಲಿ ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ ನಗರಸಭೆಯ ಅಧಿಕಾರಿಗಳ ವಿರುದ್ಧ ಟೀಕಾಪ್ರಹಾರ ನಡೆಸಿದರು. ಅಧಿಕಾರಿಗಳು ಸದಸ್ಯರಿಗೆ ಗೌರವ ನೀಡುತ್ತಿಲ್ಲ. ಸದಸ್ಯರು ಲಿಖಿತ ರೂಪದಲ್ಲಿ ಕೇಳುವ ಮಾಹಿತಿಗೆ ಉತ್ತರಿಸುತ್ತಿಲ್ಲ. ಸದಸ್ಯರಿಗೆ ಬೆಲೆಯೇ ಇಲ್ಲವಾಗಿದೆ ಎಂದು ರಾಜೇಶ್ ದಾಖಲೆಗಳೊಂದಿಗೆ ಆರೋಪಿಸಿದರು. ಇದರಿಂದ ಸಿಟ್ಟುಗೊಂಡ ಪೌರಾಯುಕ್ತ ರಾಮದಾಸ್ ತನ್ನ ವಿರುದ್ಧ ವೃಥಾರೋಪ ಮಾಡಬೇಡಿ ವೈಯಕ್ತಿಕವಾಗಿ ಟೀಕೆ ಸರಿಯಲ್ಲ ಎಂದು ಹೇಳುತ್ತಿದ್ದಂತೆ ರಾಜೇಶ್ ಕೂಡ ಏರುಕಂಠದಲ್ಲಿ ಪೌರಾಯುಕ್ತರ ವಿರುದ್ಧ ಆರೋಪದಲ್ಲಿ ತೊಡಗಿದರು. ಇದಕ್ಕೆ ರಾಮದಾಸ್ ಉತ್ತರಿಸುತ್ತಿದ್ದಂತೆಯೇ ಸಭೆಯ ವಾತಾವರಣ ಕಾವೇರತೊಡಗಿತ್ತು. ಶಾಸಕ ರಂಜನ್ ಇಬ್ಬರನ್ನೂ ಸಮಾಧಾನಪಡಿಸಿ, ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡಲೇಬೇಕು ಹಾಗೇ ಸದಸ್ಯರೂ ಅಧಿಕಾರಿಗಳಿಗೆ ಮನ್ನಣೆ ನೀಡಬೇಕು. ಪ್ರೀತಿ ವಿಶ್ವಾಸದಿಂದ ಎಲ್ಲರೂ ಒಟ್ಟಿಗೆ ಸಾಗಿದರೆ ಮಾತ್ರ ನಗರದ ಅಭಿವೃದ್ಧಿಯಾಗುತ್ತದೆ. ಆಪಾದನೆ ಮಾಡಿಕೊಂಡಿದ್ದರೆ ಯಾರ ಕೆಲಸವೂ ನಡೆಯದು. ಮುಂದಿನ ದಿನಗಳಲ್ಲಿ ಇಂಥ ಆರೋಪಗಳಿಗೆ ಯಾರೂ ಅವಕಾಶ ನೀಡದಿರಿ ಎಂದು ಸಲಹೆ ನೀಡಿದರು.
ಉಪಾಧ್ಯಕ್ಷೆ ಸವಿತಾ ರಾಕೇಶ್, ಪೌರಾಯುಕ್ತ ರಾಮದಾಸ್ ವೇದಿಕೆಯಲ್ಲಿದ್ದರು. - ಅನಿಲ್ ಎಚ್.ಟಿ.