ಪೊನ್ನಂಪೇಟೆ, ಜ.೧೧: ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ (ನಿಸರ್ಗ ಜೇಸಿಸ್) ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ವರು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಿಟ್ಟಂಗಾಲದ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ನಡೆದ ಘಟಕದ ೧೧ನೇ ಘಟಕಾಡಳಿತ ಮಂಡಳಿಯ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಳೆದ ವರ್ಷ ಅಸ್ತಿತ್ವಕ್ಕೆ ಬಂದ ಜೆಸಿಐ ಭಾರತದ ಸೀನಿಯರ್ ಮೆಂಬರ್ಸ್ ಅಸೋಸಿಯೇಷನ್ (ಎಸ್. ಎಂ. ಎ.) ರಾಷ್ಟಿçÃಯ ಮಂಡಳಿಗೆ ಸಂಸ್ಥಾಪನಾ ನಿರ್ದೇಶಕರಾಗಿ ಆಯ್ಕೆಯಾದ ಕೊಡಗಿನ ಎ. ಎಸ್. ನರೇನ್ ಕಾರ್ಯಪ್ಪ, ವೈದ್ಯಕೀಯ ಸೇವಾ ಕ್ಷೇತ್ರದಿಂದ ಗೋಣಿಕೊಪ್ಪಲಿನ ಹಿರಿಯ ಇ.ಎನ್. ಟಿ. ತಜ್ಞರಾದ ಡಾ. ಕೆ.ಕೆ. ಶಿವಪ್ಪ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಿಂದ ಬಾಳೆಲೆಯ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೆ.ಸೋಮಣ್ಣ ಮತ್ತು ಸಮಾಜ ಸೇವಾ ಕ್ಷೇತ್ರದಿಂದ ಮಾಯಮುಡಿ ಸಮೀಪದ ಬಾಲಾಜಿ ಗ್ರಾಮದ ಹಿರಿಯ ಸಮಾಜ ಸೇವಕರಾದ ಕೆ. ಟಿ. ಟಿಪ್ಪು ಬಿದ್ದಪ್ಪ ಅವರನ್ನು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸ ಲಾಯಿತು. ಘಟಕದ ನೂತನ ಅಧ್ಯಕ್ಷ ಎ. ಪಿ. ದಿನೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಘಟಕದ ಸ್ಥಾಪಕಾಧ್ಯಕ್ಷರಾದ ರಫೀಕ್ ತೂಚಮಕೇರಿ ಸನ್ಮಾನಿತರನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜೇಸಿಸ್ನ ವಲಯ ೧೪ರ ನಿಕಟಪೂರ್ವ ವಲಯಾಧ್ಯಕ್ಷರು ಮತ್ತು ಜೆಸಿಐ ಭಾರತದ ಅಧಿಕೃತ ಸಂಚಿಕೆಯ ಸಂಪಾದಕ ಮಂಡಳಿಯ ಮುಖ್ಯಸ್ಥರೂ ಆಗಿರುವ ಸೆನೆಟರ್ ಭರತ್ ಎನ್. ಆಚಾರ್ಯ, ವಲಯ ೧೪ರ ‘ಡಿ' ಪ್ರಾಂತ್ಯದ ವಲಯ ಉಪಾಧ್ಯಕ್ಷರಾದ ಯಶಸ್ವಿನಿ, ಜೆಸಿಐ ಭಾರತದ ಎಸ್.ಎಂ.ಎ. ವಲಯ ಮಂಡಳಿ ಮುಖ್ಯಸ್ಥರಾದ ಮೈಸೂರಿನ ಕೆ.ಎಸ್. ಕುಮಾರ್, ಎಸ್. ಎಂ.ಎ ವಿಭಾಗದ ವಲಯ ಸಂಯೋಜಕ ಬಿ.ಈ. ಕಿರಣ್, ನಿರ್ಗಮಿತ ಅಧ್ಯಕ್ಷ ಎಂ. ಎನ್. ವನಿತ್ ಕುಮಾರ್, ನೂತನ ಕಾರ್ಯದರ್ಶಿ ಶರತ್ ಸೋಮಣ್ಣ, ಜೂನಿಯರ್ ಜೇಸಿ ವಿಭಾಗದ ಮುಖ್ಯಸ್ಥರಾದ ಎ.ಡಿ.ಚರಣ್ ಚಂಗಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜೆಸಿಐ ಪೊನ್ನಂಪೇಟೆ ನಿಸರ್ಗ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಸದಸ್ಯರು, ಪಾಲ್ಗೊಂಡಿದ್ದರು.