*ಗೋಣಿಕೊಪ್ಪ, ಜ. ೧೧: ರೂ. ೫೦ ಲಕ್ಷ ಅನುದಾನದಲ್ಲಿ ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಳ್ಳಿ ಗ್ರಾಮದ ರಾಮತೀರ್ಥ ಹೊಳೆಗೆ ತಡೆಗೋಡೆ ನಿರ್ಮಾಣದ ಕಾಮಗಾರಿಯನ್ನು ಶಾಸಕ ಕೆ.ಜಿ. ಬೋಪಯ್ಯ ಪರಿಶೀಲಿಸಿದರು.

ಮಂಚಳ್ಳಿ ಗ್ರಾಮದಲ್ಲಿ ರಾಮತೀರ್ಥ ಹೊಳೆ ಹರಿಯುತ್ತಿದ್ದು, ಹೊಳೆಯ ಅಂಚಿನಲ್ಲೇ ಗ್ರಾಮಕ್ಕೆ ತೆರಳಲು ರಸ್ತೆಯೊಂದಿದ್ದು, ಕಳೆದ ಬಾರಿಯ ಮಳೆಯ ತೀವ್ರತೆಗೆ ನದಿಯ ದಡ ಕುಸಿದಿತ್ತು. ಇದರಿಂದ ಮಂಚಳ್ಳಿ ಗ್ರಾಮಕ್ಕೆ ತೆರಳಲು ಗ್ರಾಮಸ್ಥರಿಗೆ ಅಸಾಧ್ಯವಾಗಿತ್ತು. ಈ ಕಾರಣ ಮುಂದಿಟ್ಟು ಗ್ರಾಮಸ್ಥರು ಶಾಸಕರಿಗೆ ನದಿಗೆ ತಡೆಗೋಡೆ ನಿರ್ಮಿಸಿ ಕೊಡುವಂತೆ ಮನವಿ ಸಲ್ಲಿಸಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಶಾಸಕರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಅನುದಾನ ವನ್ನು ಬಳಸಿ ರೂ. ೫೦ ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಂಡರು. ಕಾಮಗಾರಿಯು ಶೀಘ್ರ ಗತಿಯಲ್ಲಿ ನಡೆಯುತ್ತಿದ್ದು, ಶಾಸಕರು ಪರಿಶೀಲನೆ ನಡೆಸಿ ತುರ್ತಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ಗ್ರಾಮಸ್ಥರಿಗೆ ಅನುಕೂಲಕರ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ರೂ. ೫೦ ಲಕ್ಷ ಅನುದಾನ ವನ್ನು ಒದಗಿಸಿಕೊಟ್ಟ ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿದರು. ಗ್ರಾ.ಪಂ. ಅಧ್ಯಕ್ಷ ಟಿ.ಎಂ. ಗಣಪತಿ, ಉಪಾಧ್ಯಕ್ಷೆ ದಿವ್ಯ ಮನೋಜ್, ಸದಸ್ಯ ತೀತಿರ ಎಂ. ತೀರ್ಥ ಮಂಜುನಾಥ್, ಶಕ್ತಿ ಕೇಂದ್ರದ ಪ್ರಮುಖ್ ಮಂಜುನಾಥ್, ಜಿ.ಪಂ. ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ, ಕೆ.ಬಾಡಗ ಶಕ್ತಿ ಕೇಂದ್ರದ ಪ್ರಮುಖ್ ಪೆಮ್ಮಣಮಾಡ ನವೀನ್, ಗುತ್ತಿಗೆದಾರ ದಿನೇಶ್, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಕಾಂತರಾಜು, ಗ್ರಾಮಸ್ಥರು ಹಾಜರಿದ್ದರು.