ಮಡಿಕೇರಿ, ಜ. ೧೧: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ಕೊಡಗಿನ ಶಾಸಕರುಗಳಿಗೆ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರಕಾರ ನೌಕರರ ವೇತನ ಮಾದರಿಯಲ್ಲಿ ರಾಜ್ಯ ಸರಕಾರದ ನೌಕರರಿಗೆ ವೇತನ ಪರಿಷ್ಕರಣೆ ಯಾಗಬೇಕು, ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸ ಬೇಕು, ವಿವಿಧ ಇಲಾಖೆಗಳಲ್ಲಿರುವ ಹುದ್ದೆಗಳ ಭರ್ತಿಗೆ ಸರಕಾರ ಕ್ರಮ ವಹಿಸಬೇಕು, ಶಿಕ್ಷಕರ ಹಾಗೂ ಉಪನ್ಯಾಸಕರ ನೇಮಕಾತಿ ನಿಯಮಗಳನ್ನು ಸಮಗ್ರ ತಿದ್ದುಪಡಿಗೊಳಿಸಬೇಕು, ಶಾಲಾ ಶಿಕ್ಷಕರ ಅನುಭವ ಹಾಗೂ ವಿದ್ಯಾರ್ಹತೆ ಪರಿಗಣಿಸಿ ಪರೀಕ್ಷೆಗಳಿಲ್ಲದೆ ಪದೋನ್ನತಿ ಮಾಡಬೇಕು, ಗ್ರಾಮೀಣ ಕೃಪಾಂಕ ಶಿಕ್ಷಕರಿಗೆ ಸಂಪುಟ ಸಭೆಯ ನಿರ್ಣಯ ದಂತೆ ಸೌಲಭ್ಯ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಕೆ.ಜಿ ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ, ಶಾಂತೆಯAಡ ವೀಣಾ ಅಚ್ಚಯ್ಯ, ಪಶ್ಚಿಮ್ಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಂಘದ ಪ್ರಮುಖರು ಸರಕಾರದ ಗಮನ ಸೆಳೆಯುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭ ಜಿಲ್ಲಾಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್, ಖಜಾಂಚಿ ರಾಜೇಶ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಗುರುರಾಜ್, ಸೋಮವಾರ ಪೇಟೆ ತಾಲೂಕು ಅಧ್ಯಕ್ಷ ಪ್ರದೀಪ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.