ಕುಶಾಲನಗರ, ಜ ೧೧ : ದುಶ್ಚಟಗಳು ಕುಟುಂಬದ ನೆಮ್ಮದಿ ಹಾಳುಮಾಡುವ ಜೊತೆಗೆ ಮಾನವನ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೈಲುಕುಪ್ಪೆಯಲ್ಲಿ ನಡೆದ ೧೫೦೧ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಪ್ರತಿಯೊಬ್ಬರೂ ಬದುಕಿನ ಸಾರವನ್ನು ಅರಿತು ಜೀವನ ನಡೆಸಬೇಕಾಗಿದೆ ಎಂದು ಕರೆ ನೀಡಿದರು.
ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಪಿರಿಯಾಪಟ್ಟಣ ಕ್ಷೇತ್ರದ ಶಾಸಕ ಕೆ. ಮಹದೇವ್ ಮಾತನಾಡಿ, ದುಶ್ಚಟದಿಂದ ದೂರವಿದ್ದಲ್ಲಿ ಸಮಾಜದಲ್ಲಿ ಸತ್ಪçಜೆಗಳಾಗಿ ಬಾಳಬಹುದು ಎಂದರು.
ದುಸ್ಥಿತಿಯನ್ನರಿತ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಸರ್ಕಾರವೇ ಮಾಡಲಾಗದ ಮಧ್ಯವರ್ಜನ ಶಿಬಿರದ ಯೋಜನೆಯನ್ನು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಸಿ ಲಕ್ಷಾಂತರ ಕುಟುಂಬದ ರಕ್ಷಣೆ ಮಾಡುತ್ತಿರುವುದು ತುಂಬಾ ಹೆಮ್ಮೆಯ ವಿಚಾರ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕೊಡಗು ಜಿಲ್ಲೆಯ ಸ್ಥಾಪಕಾಧ್ಯಕ್ಷರಾದ ಎಂ.ಬಿ.ಅಭಿಮನ್ಯು ಕುಮಾರ್ ಮಾತನಾಡಿ, ಎಲ್ಲಿಯವರೆಗೆ ಈ ದೇಶದಲ್ಲಿ ಕುಡಿತದ ಪೆಡಂಭೂತ ಇರುತ್ತದೆಯೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ ಅಸಾಧ್ಯ ಎಂದರು. ದೇಶದಲ್ಲಿ ಮತ್ತು ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡಲು ವಿಫಲವಾಗಿರುವುದು ದುರದೃಷ್ಟಕರ. ಸರ್ಕಾರಗಳು ಮಾಡದೆ ಇರುವ ಮದ್ಯಪಾನ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಮದ್ಯ ವರ್ಜನ ಶಿಬಿರವನ್ನು ರಾಜ್ಯದಾದ್ಯಂತ ಯಶಸ್ವಿಯಾಗಿ ನಡೆಸುತ್ತಿರುವುದು ತುಂಬಾ ಸಂತೋಷದಾಯಕವಾಗಿದೆ ಎಂದು ನುಡಿದರು. ಶಿಬಿರದ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಡು ಸಂದರ್ಭೋಚಿತವಾಗಿ ಮಾತನಾಡಿ ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಕುರಿತಾಗಿ ಶಿಬಿರಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭ ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಣುಕಸ್ವಾಮಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಡಾ. ಯೋಗೀಶ್, ಯೋಗ ಗುರು ಗಜೇಂದ್ರ ರಾಜೇಂದ್ರ, ಶಿಬಿರಾಧಿಕಾರಿ ದೇವಿಪ್ರಸಾದ್, ಆರೋಗ್ಯ ಸಹಾಯಕಿ ರಂಜಿತ, ಮದ್ಯವರ್ಜನ ಶಿಬಿರದ ಸಮಿತಿಯ ಅಧ್ಯಕ್ಷ ರಾಜೇಶ್, ಯೋಜನಾಧಿಕಾರಿ ಸುರೇಶ್ ಶೆಟ್ಟಿ, ಮೇಲ್ವಿಚಾರಕರಾದ ಮಧುರ ವಸಂತ್, ಸೇವಾ ಪ್ರತಿನಿಧಿಗಳು ಸೇರಿದಂತೆ ೧೨೪ ಶಿಬಿರಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಇದ್ದರು.