ಮಡಿಕೇರಿ, ಜ. ೧೧: ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪೊನ್ನಂಪೇಟೆಯಲ್ಲಿ ನಡೆಸುತ್ತಿರುವ ಬಾಲಕ, ಬಾಲಕಿಯರ ಕ್ರೀಡಾ ವಸತಿ ನಿಲಯಕ್ಕೆ ೨೦೨೨-೨೩ನೇ ಸಾಲಿಗೆ ಪ್ರತಿಭಾನ್ವಿತ ಹಾಕಿ ಕ್ರೀಡಾಪಟುಗಳ ಆಯ್ಕೆ ತಾ. ೧೭ ರಂದು ಪೊನ್ನಂಪೇಟೆ ತಾಲೂಕು ಮಿನಿ ಕ್ರೀಡಾಂಗಣ, ತಾ. ೧೮ ರಂದು ಮಡಿಕೇರಿ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಮತ್ತು ತಾ. ೧೯ ರಂದು ಸೋಮವಾರಪೇಟೆ ತಾಲೂಕಿನ ಕೂಡಿಗೆ ಸರ್ಕಾರಿ ಕ್ರೀಡಾ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್. ಗುರುಸ್ವಾಮಿ ತಿಳಿಸಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಆಯಾಯ ದಿನಗಳಂದು ಬೆಳಿಗ್ಗೆ ೯.೩೦ ಗಂಟೆ ಒಳಗೆ ಇಲಾಖಾ ತರಬೇತುದಾರರಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಆಯ್ಕೆಗೆ ಅರ್ಹ ಕ್ರೀಡಾಪಟುಗಳು ಕೊಡಗು ಜಿಲ್ಲೆಯ ನಿವಾಸಿಗಳಾಗಿರ ಬೇಕು, ೨೦೦೯ ನಂತರ ಹುಟ್ಟಿದವ ರಾಗಿರಬೇಕು, ೮ನೇ ತರಗತಿಗೆ ಮಾತ್ರ ಪ್ರವೇಶ ನೀಡಲಾಗುವುದು. ಆಯ್ಕೆಗೆ ಬರುವ ಕ್ರೀಡಾಪಟುಗಳ ಎತ್ತರ ೧೫೦ ಸೆ.ಮೀ. ಕಡ್ಡಾಯವಾಗಿ ಇರಬೇಕು. ದೈಹಿಕ ಸಾಮರ್ಥ್ಯದ ಬಗ್ಗೆ ಸರ್ಕಾರಿ ವೈದ್ಯರಿಂದ ವೈದ್ಯಕೀಯ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ತೆಗೆದುಕೊಂಡು ಆಗಮಿಸಬೇಕು.
ಆಯ್ಕೆಯಲ್ಲಿ ಭಾಗವಹಿಸಲು ಬರುವ ಕ್ರೀಡಾಪಟುಗಳು ಕಡ್ಡಾಯ ವಾಗಿ ಆಧಾರ್ ಕಾರ್ಡ್ ತರಬೇಕು. ಆಯ್ಕೆಯಲ್ಲಿ ಭಾಗವಹಿಸಲು ಬರುವಂತಹ ಕ್ರೀಡಾಪಟುಗಳು ೭ನೇ ತರಗತಿಯಲ್ಲಿ ಓದುತ್ತಿರುವ ದೃಢೀಕರಣ ಪತ್ರ, ಜನ್ಮ ದಿನಾಂಕ ದೃಢೀಕರಣ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರಿಂದ ದೃಢೀಕರಿಸಿ ಕಡ್ಡಾಯವಾಗಿ ತರತಕ್ಕದ್ದು, ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ ಆದವರಿಗೆ ಊಟೋಪಹಾರ, ವಸತಿ ಮತ್ತು ಕ್ರೀಡಾ ಕಿಟ್ಗಳನ್ನು ಇಲಾಖೆಯ ವತಿಯಿಂದ ಉಚಿತವಾಗಿ ಒದಗಿಸಲಾಗುವುದು. ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಇಲಾಖೆ ವತಿಯಿಂದ ಯಾವುದೇ ಭತ್ಯೆ ನೀಡಲಾಗುವುದಿಲ್ಲ, ಹಾಕಿ ಪ್ರಕ್ರಿಯಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾ ಪಟುಗಳು ಹಾಕಿ ಕಿಟ್ ತರತಕ್ಕದು (ಹಾಕಿಸ್ಟಿಕ್, ಶಿನ್ಗಾರ್ಡ್, ಶೂ ಇತರೆ) ಎಂದು ತಿಳಿಸಿದ್ದಾರೆ.