ಕೂಡಿಗೆ, ಜ. ೧೦: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಮತ್ತು ಜಿಲ್ಲಾ ಕೃಷಿಕ ಸಮಾಜ ಹಾಗೂ ಸೋಮವಾರಪೇಟೆ ತಾಲೂಕು ಕೃಷಿಕ ಸಮಾಜ ಇವುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಮಟ್ಟದ ರೈತರ ದಿನಾಚರಣೆ ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಭಾಂಗಣ ದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಪ್ರಗತಿ ಪರ ರೈತರು ನೆರವೇರಿಸಿ ದರು. ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಚೋಟು ಕಾವೇರಪ್ಪ ಮಾತನಾಡಿ, ಜಿಲ್ಲೆಯ ರೈತರು ತಮ್ಮ ಜಮೀನಿನಲ್ಲಿ ವೈಜ್ಞಾನಿಕ ಬೇಸಾಯ ಮಾಡುವ ಮೂಲಕ ಹೆಚ್ಚು ಇಳುವರಿಯನ್ನು ಪಡೆಯಬಹುದು ಎಂದರು.
ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಬಾನ್ ಶೇಕ್ ರೈತ ದಿನಾಚರಣೆಯ ಉದ್ದೇಶ ಮತ್ತು ರೈತರ ಪ್ರಗತಿಗೆ ಪೂರಕವಾದ ಅಂಶ ಗಳ ಬಗ್ಗೆ ಮಾಹಿತಿ ನೀಡಿದರು.
ಸೋಮವಾರಪೇಟೆ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಆರ್.ಕೆ. ಯಾದವಬಾಬು ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿ ದರು.
ಸಭೆಯಲ್ಲಿ ಸೋಮವಾರಪೇಟೆ ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ವೀರಾಜಪೇಟೆ ತಾಲೂಕು ಕೃಷಿಕ ಸಮಾಜದ ರಘು ನಾಣಯ್ಯ, ಉಪಾಧ್ಯಕ್ಷ ಗೋವಿಂದ ರಾಜ್, ಕೃಷಿ ಇಲಾಖೆ ಉಪ ನಿರ್ದೇಶಕ ಮುತ್ತುರಾಜ್, ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್ ಪಾಟೀಲ್, ಶಿವಮೂರ್ತಿ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿಷಯ ತಜ್ಞ ಡಾ. ವೀರೇಂದ್ರ ಕುಮಾರ್, ಡಾ. ಕೆಂಚಾರೆಡ್ಡಿ, ಕಾಫಿ ಮಂಡಳಿ ಹಿರಿಯ ಸಂಪರ್ಕ ಅಧಿಕಾರಿ ಡಾ. ಗೋಪಾಲ ನಾಯಕ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಿ.ಎಂ. ಪ್ರಮೋದ್ ಹಾಜರಿದ್ದರು.
ಈ ಸಂದರ್ಭ ಕೃಷಿ ಪ್ರಶಸ್ತಿ ಪಡೆದ ಮತ್ತು ಬೆಳೆ ಸ್ಪರ್ಧೆ ಬಹುಮಾನ ಪಡೆದ ರೈತರುಗಳನ್ನು ಸನ್ಮಾನಿಸಲಾಯಿತು. ಪಿ.ಐ. ಅಯ್ಯಪ್ಪ, ತೀತಮಾಡ ರಮೇಶ್ ಕಾರ್ಯಪ್ಪ, ಕಾಳಿಮಾಡ ಎಂ. ನಂಜಪ್ಪ, ಕಪನಪ್ಪ, ಚಿದಾನಂದ, ವಸಂತ, ಹೇಮಂತ್ ಕುಮಾರ್, ಕೆ.ಸಿ. ಜಯ ಇವರುಗಳು ಸನ್ಮಾನ ಸ್ವೀಕರಿಸಿದರು.
ಮಾಧವರಾವ್ ಚಂದ್ರು ಪ್ರಾರ್ಥಿಸಿ, ರೈತ ಗೀತೆ ಹಾಡಿದರು. ರೈತ ಸಂಪರ್ಕ ಕೇಂದ್ರ ಅಧಿಕಾರಿ ಅರುಣ ಕಾರ್ಯಕ್ರಮ ನಿರೂಪಿಸಿದರು. ಆರ್.ಕೆ. ಯಾದವ್ ಬಾಬು ಸ್ವಾಗತಿಸಿ, ವಂದಿಸಿದರು.