ವೀರಾಜಪೇಟೆ, ಜ. ೧೧: ವೀರಾಜಪೇಟೆ ಸಮೀಪದ ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿಯ ವಾರ್ಡ್ ಸಭೆ ಮಗ್ಗುಲ ಗ್ರಾಮದ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.

ಮಗ್ಗುಲ ಹಾಗೂ ವಿನಾಯಕ ನಗರದಲ್ಲಿ ಬೇಸಿಗೆಯಲ್ಲಿ ನೀರಿಗೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಮುಂಜಾಗ್ರತೆಯಾಗಿ ಕ್ರಮವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಪಂಚಾಯ್ತಿ ಸದಸ್ಯರು ಮತ್ತೊಂದು ಬೋರ್ ವೆಲ್ ಮಾಡಲು ಅನುಮತಿ ದೊರೆತಿದೆ ಶೀಘ್ರ ಕೆಲಸ ಆರಂಭಿಸುವುದಾಗಿ ಹೇಳಿದರು.

ಬಹುತೇಕ ಗ್ರಾಮಸ್ಥರು ಮನೆಯ ಪಕ್ಕದ ರಸ್ತೆ, ಚರಂಡಿ ಸ್ಮಶಾನಕ್ಕೆ ಹೋಗುವ ದಾರಿಗಳಿಗಾಗಿ ಮನವಿ ಸಲ್ಲಿಸಿದರು. ಅಲ್ಲದೇ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ವಿನಂತಿಸಿದರು. ಇನ್ನೂ ಪಂಚಾಯಿತಿ ಸದಸ್ಯರುಗಳು ಪಂಚಾಯಿತಿಗೆ ಕೋವಿಡ್ ಕಾರಣದಿಂದ ಅನುದಾನ ಬಂದಿಲ್ಲ. ಇರುವ ಆದಾಯದಲ್ಲಿಯೇ ಸರಿದೂಗಿಸಿಕೊಂಡು ಕಾಮಗಾರಿ ಮಾಡಬೇಕು ಎಂದು ಸಮಾಜಹಿಷಿಕೆ ನೀಡಿದರು.

ಗ್ರಾಮದಲ್ಲಿ ಹಲವು ಒಂಟಿ ಮನೆಗಳಿದ್ದು, ಬೀಟ್ ಪೊಲೀಸರು ಅಂತರರಾಜ್ಯ ಕಾರ್ಮಿಕರು ಹಾಗೂ ಅಪರಿಚಿತರ ಮೇಲೆ ಕಣ್ಣಿಟ್ಟಿರಬೇಕು. ಸಿದ್ದಾಪುರ-ವೀರಾಜಪೇಟೆ ರಸ್ತೆಯಲ್ಲಿ ಅಪಾಯಕಾರಿ ತಿರುವು ಇರುವುದರಿಂದ ವಿನಾಯಕನಗರದ ಬಳಿ ಬ್ಯಾರಿಕೇಡ್ ಅಳವಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಕ್ರಮಕೈಗೊಳ್ಳಿ, ಪಂಚಾಯಿತಿಯ ಆದಾಯ ಮೂಲ ಹೆಚ್ಚಾಗಬೇಕಾದರೆ ಗ್ರಾಮದಲ್ಲಿ ಹಲವು ವಾಣಿಜ್ಯ ಉದ್ದೇಶವನ್ನು ಹೊಂದಿರುವ ಸಂಸ್ಥೆಗಳಿವೆ ಅವುಗಳ ಮೇಲಿನ ತೆರಿಗೆಯನ್ನು ಹೆಚ್ಚು ಮಾಡುವಂತೆ ಗ್ರಾಮಸ್ಥರು ಸಲಹೆ ನೀಡಿದರು.

ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದ ವಾಸು ಮಾತನಾಡಿ, ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಮಾಡಲು ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು.

ಸಭೆೆಯಲ್ಲಿ ಗ್ರಾಮಪಂಚಾಯತ್ ಉಪಾಧ್ಯಕ್ಷ ಉಮೇಶ್, ಸದಸ್ಯ ಕಿರಣ್, ಪಿಡಿಒ ಜಯಪ್ರಕಾಶ್, ಮಾಜಿ ತಾ.ಪಂ ಅಧ್ಯಕ್ಷ ವಾಟೇರಿರ ಬೋಪಣ್ಣ, ಗ್ರಾಮದ ಅಧ್ಯಕ್ಷ ಚೋಕಂಡ ರಮೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.