ಗೋಣಿಕೊಪ್ಪಲು, ಜ.೧೦ : ದ.ಕೊಡಗಿನ ವಿವಿಧ ಭಾಗಗಳಲ್ಲಿ ಹುಲಿ ಹಾವಳಿ ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳಿಂದ ಈ ಭಾಗದ ರೈತರು, ಕಾರ್ಮಿಕರು ಕಂಗಾಲಾಗಿದ್ದಾರೆ.

ಬೆಳ್ಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಐದು ಜಾನುವಾರುಗಳು ಹುಲಿಯ ಪಾಲಾಗಿವೆ, ಈ ಭಾಗದಲ್ಲಿ ಅಡಗಿರುವ ವ್ಯಾಘ್ರನ ಸೆರೆಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಎಚ್ಚರಿಕೆ ನೀಡಿದ್ದಾರೆ.

ರೈತ ಸಂಘದ ಕೇಂದ್ರ ಕಚೇರಿ ಗೋಣಿಕೊಪ್ಪಲುವಿನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಈಗಾಗಲೇ ನೂತನ ವರ್ಷಾರಂಭದಲ್ಲಿ ರೈತರ ೫ ಜಾನುವಾರುಗಳು ಹುಲಿಯ ಪಾಲಾಗಿವೆ. ಆದರೂ ಹುಲಿ ಸೆರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಾ ದಿನ ಕಳೆಯುತ್ತಿದ್ದಾರೆ ಎಂದು ಆರೋಪ ಮಾಡಿದರು.

ಮುಂದೆ ಈ ಹುಲಿಯು ಜನರ ಮೇಲೆಯೂ ದಾಳಿ ನಡೆಸಬಹುದು; ತಕ್ಷಣವೇ ಹುಲಿಯ ಸೆರೆಗೆ ಕ್ರಮ ಕೈಗೊಳ್ಳಬೇಕು, ಮಾನವನ ಮೇಲೆ ಹುಲಿ ದಾಳಿ ನಡೆಸಿದರೇ ಅದರ ಸಂಪೂರ್ಣ ಹೊಣೆಯನ್ನು ಅಧಿಕಾರಿಗಳು ಹೊರಬೇಕು. ಇಂತಹ ಅನಾಹುತಗಳಿಗೆ ಎಡೆ ಮಾಡಿಕೊಡದ ರೀತಿಯಲ್ಲಿ ಇಲಾಖೆಯ ಅಧಿಕಾರಿಗಳು ಹುಲಿಯ ಸೆರೆಗೆ ಕಠಿಣ ಕ್ರಮ ಕೈಗೊಳ್ಳಬೇಕು ಹುಲಿಯನ್ನು ಸೆರೆಹಿಡಿಯಲೇಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಹುದಿಕೇರಿ ಹೋಬಳಿಯ ಬೆಳ್ಳೂರು ವಿನಲ್ಲಿ ಮಾನವನ ಮೇಲೆ ಹುಲಿದಾಳಿ ನಡೆಸಿದ್ದು, ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ರೈತರ ೭೦ ಜಾನುವಾರುಗಳು ಹುಲಿಯ ಪಾಲಾಗಿವೆ ಇಷ್ಟು ಮಾಹಿತಿ ಅಧಿಕಾರಿಗಳ ಬಳಿ ಇದ್ದರೂ ಇದೀಗ ಆರಂಭಿಕ ಹಂತದಲ್ಲಿ ಹುಲಿಯ ಸೆರೆಗೆ ಹಿಂದೇಟು ಏಕೇ ? ಎಂದು ಅವರು ಪ್ರಶ್ನಿಸಿದರು. ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮಾತನಾಡಿ ಜಿಲ್ಲೆಯಲ್ಲಿ ಹುಲಿ ಹಾಗೂ ಕಾಡಾನೆಗಳ ಉಪಟಳದಿಂದ ದಿನ ನಿತ್ಯ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.

ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ರೈತ ಸಂಘ ಮುಖಂಡರನ್ನೊಳಗೊAಡ ಸಭೆ ಕರೆಯುವಂತೆ ಅನೇಕ ಬಾರಿ ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯ ತನಕ ಸಭೆ ಆಯೋಜಿಸುವ ಕುರಿತು ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ; ಕೂಡಲೇ ಜಿಲ್ಲಾಧಿಕಾರಿ ಸಭೆ ಆಯೋಜಿಸುವಂತೆ ಒತ್ತಾಯಿಸಿದರು.

ರೈತರ ಜಾನುವಾರುಗಳ ಮೇಲೆ ಹುಲಿಯು ದಾಳಿ ನಡೆಸಿದ ಸಂದರ್ಭ ಕೇವಲ ಪರಿಹಾರ ನೀಡಿ ತಮ್ಮ ಕರ್ತವ್ಯದಿಂದ ಜಾರಿ ಕೊಳ್ಳುವ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಹಸುವಿನ ಮೇಲೆ ದಾಳಿ ನಡೆದಾಗ ಹಣದ ಪರಿಹಾರದ ಬದಲು ಹಸುವನ್ನೆ ನೀಡುವಂತೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಚೆಂಗುಲAಡ ಸೂರಜ್ ರೈತ ಮುಖಂಡರಾದ ಮಿದೇರಿರ ಕವಿತರಾಮು, ಚೊಟ್ಟೆಕಾಳಪಂಡ ಮನು ಹಾಗೂ ಕಾಡ್ಯಮಾಡ ಎಂ.ಜೀವನ್ ಉಪಸ್ಥಿತರಿದ್ದರು.