ಮಡಿಕೇರಿ, ಜ. ೧೦: ರಾಜ್ಯದ ಹಿರಿಯ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಚಂಪಾ ಎಂದೆ ಖ್ಯಾತಿ ಹೊಂದಿದ್ದ ಚಂದ್ರಶೇಖರ್ ಪಾಟೀಲ್ (೮೩) ನಿಧನಕ್ಕೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂತಾಪ ಸೂಚಿಸಿತು.

ನಗರದ ಪರಿಷತ್ತು ಕಚೇರಿ ಆವರಣದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ಮಾಡಿ ಅಗಲಿದ ಸಾಹಿತಿಯನ್ನು ಸ್ಮರಿಸಲಾಯಿತು.

ಕ.ಸಾ.ಪ. ಜಿಲ್ಲಾಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಚಂಪಾ ಅವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಾಹಿತ್ಯದ ಮೂಲಕ ಸಮಾಜವನ್ನು ಎಚ್ಚರಿಸಿದ್ದಾರೆ. ಬಂಡಾಯ ಸಾಹಿತ್ಯ ಮೂಲಕ ದಾರಿ ತಪ್ಪುತ್ತಿದ ಸಮಾಜವನ್ನು ಸರಿ ದಾರಿಗೆ ತರಲು ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದುಡಿದು ಬೆಳೆಸಿದ್ದಾರೆ. ಅವರ ನಿಧನ ಸಾಹಿತ್ಯ ಕ್ಷೇತ್ರವಲ್ಲದೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು.

ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಸಾಹಿತ್ಯ ಕ್ಷೇತ್ರದ ದಿಗ್ಗಜರಾಗಿದ್ದ ಚಂಪಾ ಅವರು ಹಲವು ಕನ್ನಡಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. ಗೋಕಾಕ್ ಚಳವಳಿಯಲ್ಲಿ ಮುಂಚೂಣಿ ಯಲ್ಲಿದ್ದರು. ಕನ್ನಡ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಭಾಷೆ, ಸಾಹಿತ್ಯ ಬೆಳವಣಿಗೆಗೆ ಅಗಾಧವಾಗಿ ದುಡಿದಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಹಿರಿಯ ಸಾಹಿತಿ ಷಂಶುದ್ದೀನ್, ಕ.ಸಾ.ಪ ಜಿಲ್ಲಾ ಕೋಶಾಧಿಕಾರಿ ವಿಜೇತ್, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಕಾರ್ಯಕಾರಿ ಸಮಿತಿ ಸದಸ್ಯರಾದ ರೇವತಿ ರಮೇಶ್, ವೆಂಕಟ ನಾಯಕ್, ಫ್ಯಾನ್ಸಿ ಮುತ್ತಣ್ಣ, ಸಹನಾ ಕಾಂತಬೈಲು, ರಮ್ಯ ಕೆ.ಜಿ., ಪ್ರೇಮ್ ಕುಮಾರ್, ಸದಸ್ಯರಾದ ಎಂ.ಇ. ಮೊಹ್ದಿನ್, ಮನುಶೆಣೈ, ಅಲ್ಲಾರಂಡ ವಿಠಲ, ಕಡ್ಲೇರ ತುಳಸಿ, ಮಾಲಾ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕಾರಿ ಮಂಜುನಾಥ್ ಇದ್ದರು.