ಮಡಿಕೇರಿ, ಜ. ೧೦: ನಗರದ ಓಂಕಾರೇಶ್ವರ ದೇವಾಲಯದ ಸುಪರ್ದಿಯಲ್ಲಿರುವ ಗೋಶಾಲೆಗೆ ಕೊಡಗು ರಕ್ಷಣಾ ವೇದಿಕೆ ವತಿಯಿಂದ ಮೇವು ಒದಗಿಸುವ ಮೂಲಕ ನೆರವು ನೀಡಲಾಯಿತು.

ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅವರು ಸೇವಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು. ಜನರು ಹಾಗೂ ಸಂಘಟನೆಗಳು ಗೋಶಾಲೆಯ ಅಭಿವೃದ್ಧಿಗೆ ಮುಂದಾಗಬೇಕು. ಸರಕಾರದೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.

ವೈದ್ಯರಾದ ಮೋಹನ್ ಅಪ್ಪಾಜಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪ್ರಾಮುಖ್ಯತೆ ಇದೆ. ಗೋ ಸಂರಕ್ಷಣೆಯಾಗಬೇಕು. ಈ ನಿಟ್ಟಿನಲ್ಲಿ ಕೊರವೇ ನೇತೃತ್ವ ವಹಿಸಿ ಸಮಾಜಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘಟನೆಯ ಅಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ ಮಾತನಾಡಿ, ಸಂಘಟನೆಯ ಹೋಬಳಿ ಘಟಕಗಳು ಸಾಮಾಜಿಕ ಕಾರ್ಯಕ್ಕೆ ಸಹಾಯ ಮಾಡಿವೆ. ಗೋವುಗಳಿಗೆ ವರ್ಷಕ್ಕೆ ಅಗತ್ಯವಿರುವ ೮೦೦ ಕಂತೆ ಹುಲ್ಲನ್ನು ಮೊದಲ ಹಂತದಲ್ಲಿ ಒದಗಿಸಲಾಗಿದೆ. ಬೇಕಾದಲ್ಲಿ ಮೇವುಗಳನ್ನು ನೀಡಲಾಗುವುದು. ಒಂದು ವರ್ಷ ಪಶುಪಾಲನೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಮಂಜುನಾಥ್, ಚಂದ್ರಕುಮಾರ್, ಮೇದಪ್ಪ, ಸೋಮಯ್ಯ, ಶಿವಕುಮಾರ್, ಖಾದರ್, ವಿಜಯ್, ಜ್ಞಾನೇಶ್, ಸಂಪತ್ ಸೇರಿದಂತೆ ಇನ್ನಿತರರು ಹಾಜರಿದ್ದರು.