(ವಿಶೇಷ ವರದಿ: ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಜ.೧೦: ದ.ಕೊಡಗಿನಲ್ಲಿ ಹುಲಿ ಹಾವಳಿಯಿಂದಾಗಿ ರೈತರ ಜಾನುವಾರುಗಳು ಒಂದೊAದೇ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ಹುಲಿಯ ಚಲನವಲನಗಳನ್ನು ಗಮನಿಸಲು ಆಯಾ ಕಟ್ಟಿನ ಜಾಗದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿದ್ದರು. ಆರಂಭಿಕ ಹಂತದಲ್ಲಿ ಹುಲಿಯು ಕ್ಯಾಮರಾ ಕಣ್ಣಿಗೆ ಬೀಳದೆ ತನ್ನ ದಾಳಿಯನ್ನು ಮುಂದುವರಿಸುತ್ತಲೇ ಇತ್ತು. ದಿನ ಕಳೆದಂತೆ ಹುಲಿಯು ಕೋಣಗೇರಿ, ಬೆಳ್ಳೂರು ಹಾಗೂ ತೂಚಮಕೇರಿ ಭಾಗದಲ್ಲಿ ಸಂಚರಿಸಿ ೫ ಹಸುಗಳನ್ನು ಕೊಂದು ಹಾಕಿತ್ತು.
ಇದರಿಂದ ಆಕ್ರೋಶಗೊಂಡ ರೈತ ಸಂಘ ಪದಾಧಿಕಾರಿಗಳು, ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ತಿತಿಮತಿ ವಲಯದ ಎಸಿಎಫ್ ಉತ್ತಪ್ಪ ಹುಲಿಯ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ನೀಡಿದ ಭರವಸೆಯಂತೆ ಹುಲಿ ಸೆರೆಗೆ ಹಿರಿಯ ಅಧಿಕಾರಿಗಳಿಗೆ ಲಿಖಿತ ಪತ್ರ ಬರೆದು ಇಲ್ಲಿನ ವಸ್ತು ಸ್ಥಿತಿಯ ಬಗ್ಗೆ ವಿವರ ನೀಡಿದ್ದರು. ಅಲ್ಲದೇ ಹುಲಿ ಸೆರೆಗೆ ಆದೇಶ ನೀಡುವಂತೆ ಕೋರಿದ್ದರು.
ತನ್ನ ಸಿಬ್ಬಂದಿಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿ ಹುಲಿಯ ಚಲನವಲನಗಳನ್ನು ಅರಿಯಲು ಸಿಸಿ ಕ್ಯಾಮರಾ ಅಳವಡಿಸಲು ಸೂಚಿಸಿದ್ದರು. ಅಲ್ಲದೇ ಹುಲಿಯ ಸೆರೆಗೆ ಬೋನನ್ನು ಅಳವಡಿಸಿ ಕ್ರಮಕ್ಕೆ ಮುಂದಾಗಿದ್ದರು.
ಇದೀಗ ಇಲಾಖೆ ಅಳವಡಿಸಿದ್ದ ಕ್ಯಾಮರಾದಲ್ಲಿ ಹುಲಿಯ ಚಿತ್ರ ಸೆರೆಯಾಗಿದೆ ಇದರಿಂದಾಗಿ ಹುಲಿಯನ್ನು ಸೆರೆಹಿಡಿಯಲು ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಇಲಾಖೆಯ ವತಿಯಿಂದ ಕೈಗೊಳ್ಳಲಾಗಿದೆ.
ಹಿರಿಯ ಅಧಿಕಾರಿಗಳ ಆದೇಶ ಪತ್ರ ಕೈ ಸೇರುತ್ತಿದ್ದಂತೆಯೇ ಹುಲಿಯ ಸೆರೆಗೆ ಕಾರ್ಯಾಚರಣೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ.