ಸೋಮವಾರಪೇಟೆ,ಜ.೧೧: ಪಟ್ಟಣದ ಕಕ್ಕೆಹೊಳೆ ಜಂಕ್ಷನ್‌ನಲ್ಲಿ ಬಸ್ ನಿಲ್ದಾಣ ಉದ್ಘಾಟನೆ ಸಂದರ್ಭ ಬಿಜೆಪಿ ಪಕ್ಷದವರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದು, ಅವರದೇ ಸರ್ಕಾರ ಜಾರಿಗೆ ತರುವ ನಿಯಮಗಳು ಕೇವಲ ಜನಸಾಮಾನ್ಯರಿಗೆ ಮಾತ್ರ ಇರುವಂತಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಗೌಡ ಆರೋಪಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆಯನ್ನು ತಡೆಯಲೆಂದು ಬಿಜೆಪಿ ಸರ್ಕಾರ ಕೊರೊನಾ ಹೆಸರಿನಲ್ಲಿ ಅನಗತ್ಯ ನಿಯಮಗಳನ್ನು ಜಾರಿಗೊಳಿಸಿದೆ. ಸಭೆ ಸಮಾರಂಭ ನಿರ್ಬಂಧಿಸಿದೆ. ಆದರೆ ಪಟ್ಟಣದಲ್ಲಿ ಆಡಳಿತ ಪಕ್ಷದ ಶಾಸಕರು, ಸಂಸದರು ಸೇರಿ ಬಸ್ ನಿಲ್ದಾಣ ಉದ್ಘಾಟನೆಯ ಹೆಸರಿನಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇವರುಗಳ ವಿರುದ್ಧ ಯಾರು ಕಾನೂನು ಕ್ರಮ ಕೈಗೊಳ್ಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಅವೈಜ್ಞಾನಿಕ ವೀಕೆಂಡ್ ಕರ್ಫ್ಯೂನಿಂದಾಗಿ ಜನ ಸಾಮಾನ್ಯರು, ವ್ಯಾಪಾರಸ್ಥರು ಸಮಸ್ಯೆಗೆ ಸಿಲುಕಿದ್ದಾರೆ. ಸರ್ಕಾರ ಜನತೆಯ ಆಶೋತ್ತರಗಳನ್ನು ಪೂರೈಸುತ್ತಿಲ್ಲ ಎಂದು ಮಿಥುನ್ ಗೌಡ ಪ್ರಶ್ನಿಸಿದ್ದು, ಅಧಿಕಾರಿಗಳೂ ಸಹ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ.