ಮಡಿಕೇರಿ, ಜ.೭ :ರೈತರು ಬೆಳೆಯುವ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನಿಗದಿಪಡಿಸಿ ಖಾತರಿ ನೀಡಬೇಕು, ಮತ್ತು ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸುವದು ಶಿಕ್ಷಾರ್ಹ ಎಂಬ ಕಾನೂನನ್ನು ಜಾರಿಗೊಳಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ತಾ.೧೧ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮುಕ್ಕಾಟಿರ ಪ್ರವೀಣ್ ಭೀಮಯ್ಯ; ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ಸೆಪ್ಟೆಂಬರ್ ೮ರಂದು ದೇಶದ ೫೬೦ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಕೇಂದ್ರ ಸರಕಾರ ಈ ಬಗ್ಗೆ ಇದುವರೆಗೆ ಯಾವದೇ ನಿರ್ಧಾರ, ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ತಾ.೧೧ರಂದು ರಾಷ್ಟಾçದ್ಯಂತ ಎಲ್ಲ ತಾಲೂಕು ಕೇಂದ್ರಗಳಲ್ಲಿ ತಹಶೀಲ್ದಾರರ ಕಚೇರಿ ಎದುರು ಧರಣಿ ನಡೆಸಿ ಮತ್ತೊಮ್ಮೆ ಮನವಿ ಸಲ್ಲಿಸಲಾಗುವದು. ಅದಕ್ಕೂ ಸ್ಪಂದನ ದೊರಕದಿದ್ದರೆ ತೀವ್ರ ಸ್ವರೂಪದ ಹೋರಾಟ ರೂಪಿಸಲಾಗುವದೆಂದು ಹೇಳಿದರು.

ನಮಗೆ ಬೆಂಬಲ ಬೆಲೆಯ ಅಗತ್ಯವಿಲ್ಲ, ಲಾಭದಾಯಕ ಬೆಲೆ ನಿಗದಿಪಡಿಸಬೇಕು, ಕಾಫಿಗೂ ಸೂಕ್ತವಾದ ಬೆಲೆಯಿಲ್ಲ, ಅಧಿಕಾರಿಗಳ, ಕೂಲಿ ಕಾರ್ಮಿಕರ ವೇತನ ಮಾತ್ರ ಏರಿಕೆಯಾಗುತ್ತಲೇ ಇದೆ. ಆದರೆ, ರೈತರ ಉತ್ಪನ್ನಗಳಿಗೆ ಮಾತ್ರ ಯಾವದೇ ಬೆಲೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಿಹಾರ ಹೆಚ್ಚಳ ಮಾಡಬೇಕು

ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಬೆಳೆ ನಷ್ಟವಾಗಿದೆ. ಆದರೆ, ಸರಕಾರ ಘೋಷಣೆ ಮಾಡಿದಷ್ಟು ಪರಿಹಾರ ರೈತರಿಗೆ ಸಿಕ್ಕಿಲ್ಲ. ಮೊದಲಿಗೆ ಹೆಕ್ಟೇರ್‌ಗೆ ರೂ.೨೫ಸಾವಿರ ಇದ್ದ ಪರಿಹಾರವನ್ನು ಅಧಿವೇಶನದಲ್ಲಿ ಮತ್ತೆ ರೂ.ಹತ್ತು ಸಾವಿರ ಹೆಚ್ಚಳ ಮಾಡಲಾಗಿದೆ. ಹಾಗಾಗಿ ರೈತರಿಗೆ ಹೆಕ್ಟೇರ್‌ಗೆ ರೂ.೩೫ಸಾವಿರದಂತೆ ಪರಿಹಾರ ನೀಡಬೇಕು. ಆದರೆ, ಜಿಲ್ಲಾಡಳಿತ ರೈತರಿಗೆ ಎರಡರಿಂದ ಐದು ಸಾವಿರದಂತೆ ಪರಿಹಾರ ನೀಡಿ ಮೋಸ ಮಾಡಿದೆ. ಕೂಡಲೇ ೩೫ಸಾವಿರ ಬಿಡುಗಡೆ ಮಾಡಬೇಕು, ಇಲ್ಲವಾದಲ್ಲಿ ಪ್ರತಿಭಟನೆ ಮಾಡುವದಾಗಿ ಹೇಳಿದರು.

ವಿದ್ಯುತ್ ಇಲಾಖೆಯಲ್ಲಿ ಅಕ್ರಮ

ವಿದ್ಯುತ್ ಇಲಾಖೆಯಲ್ಲಿ ಸಾಕಷ್ಟು ಅಕ್ರಮಗಳಾಗುತ್ತಿವೆ. ಟ್ರಾನ್ಸ್ಫಾರ್ಮರ್ ಅಳವಡಿಸಲು ಗುತ್ತಿಗೆದಾರರ ಮೂಲಕ ೫೦ ರಿಂದ ೭೦ ಸಾವಿರದಷ್ಟು ಹಣ ವಸೂಲಿ ಮಾಡಲಾಗುತ್ತಿದೆ. ಅಕ್ರಮ ಸಕ್ರಮದಡಿ ಸರಕಾರ ಉಚಿತವಾಗಿ ನೀಡುತ್ತಿದ್ದರೆ, ಇಲಾಖೆ ಅಧಿಕಾರಿಗಳು ಸಕ್ರಮವನ್ನು ಅಕ್ರಮ ಮಾಡುತ್ತಿದ್ದಾರೆ. ರೈತರು ಯಾವದೇ ಕಾರಣಕ್ಕೂ ಟ್ರಾನ್ಸ್ಫಾರ್ಮರ್‌ಗೆ ಹಣ ನೀಡಬೇಕಾಗಿಲ್ಲ, ಹಣ ಕೇಳಿದರೆ ಸಂಘವನ್ನು ಸಂಪರ್ಕಿಸುವAತೆ ಹೇಳಿದರು.

ಉಚಿತ ವಿದ್ಯುತ್ ನೀಡಬೇಕು

ಸಂಘದ ವೀರಾಜಪೇಟೆ ಅಧ್ಯಕ್ಷ ಕೊಲ್ಲಿರ ಧರ್ಮಜ ಮಾತನಾಡಿ, ಸಧ್ಯದಲ್ಲೇ ಜಿಲ್ಲಾದ್ಯಂತ ಕಾಫಿ ತೋಟಗಳಿಗೆ ನೀರು ಹಾಯಿಸುವ ಕಾರ್ಯ ಆರಂಭವಾಗಲಿದೆ. ಈ ಸಂದರ್ಭದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ಇಲಾಖೆ ವತಿಯಿಂದ ಈಗಿನಿಂದಲೇ ವಿದ್ಯುತ್ ಮಾರ್ಗ ಸರಿಪಡಿಸುವ ಕಾರ್ಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ರೈತ ಬೆಳೆದ ಭತ್ತ ಹೋಗಲಿ ಹುಲ್ಲು ಕೂಡ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕಂದಾಯ ಕಾನೂನು

ರಾಜ್ಯದಲ್ಲಿ ಇರುವ ಕಂದಾಯ ಕಾನೂನಿಗೆ ಜಿಲ್ಲೆಯನ್ನು ಒಳಪಡಿಸಿಲ್ಲ, ಇದರಿಂದಾಗಿ ಪೌತಿ ಖಾತೆ ಸೇರಿದಂತೆ ಇತರ ವಿಚಾರಗಳಲ್ಲಿ ಅಧಿಕಾರಿಗಳು ರೈತರಿಗೆ ಮೋಸ ಮಾಡುತಿದ್ದಾರೆ, ಇದನ್ನು ಸರಿಪಡಿಸಲು ಕರ್ನಾಟಕ ಕಂದಾಯ ಕಾಯ್ದೆಗೆ ಕೊಡಗನ್ನು ಒಳಪಡಿಸಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪರಮೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ರಮೇಶ್ ಇದ್ದರು.