ಗೋಣಿಕೊಪ್ಪಲು, ಜ. ೭: ದಕ್ಷಿಣ ಕೊಡಗಿನಲ್ಲಿ ಕಳೆದ ಒಂದು ವಾರದಿಂದ ರೈತರು ತಮ್ಮ ಕೊಟ್ಟಿಗೆಗಳಲ್ಲಿ ಸಾಕಿದ್ದ ನಾಲ್ಕು ಜಾನುವಾರುಗಳನ್ನು ಹುಲಿಯ ಪಾಲಾಗಿದೆ.

ಶುಕ್ರವಾರ ಮುಂಜಾನೆಯ ವೇಳೆ ತೂಚಮಕೇರಿಯ ಸಿ.ಎಸ್. ಬೋಪಯ್ಯ ಎಂಬುವರ ಕೊಟ್ಟಿಗೆಗೆ ದಾಳಿ ಇಟ್ಟ ಹುಲಿಯು ಕೊಟ್ಟಿಗೆಯಲ್ಲಿದ್ದ ಹಸುವನ್ನು ಕೊಂದು ಹಾಕಿದೆ.

ಮುಂಜಾನೆ ಕೊಟ್ಟಿಗೆಯ ಬಳಿ ತೆರಳಿದಾಗ ವಿಷಯ ತಿಳಿದ ಕಾರ್ಮಿಕರು ಮನೆಯ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ನಂತರ ಪೊನ್ನಂಪೇಟೆ ಅರಣ್ಯ ವಲಯ ಅಧಿಕಾರಿಗಳಾದ ರಾಜಪ್ಪ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಹುದಿಕೇರಿ ಸಮೀಪದ ಹುಲಿ ಸೆರೆಗೆ ಅಳವಡಿಸಿದ್ದ ಬೋನನ್ನು ಈ ಭಾಗಕ್ಕೆ ತರಿಸಿ ಹುಲಿ ಸೆರೆಗೆ ಕ್ರಮ ಕೈಗೊಂಡಿದ್ದಾರೆ.

ಎರಡು ದಿನಗಳಿಗೆ ಒಂದರAತೆ ಹಸುವನ್ನು ಸಾಯಿಸಿ,ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ. ಅಲ್ಲದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುತ್ತಾಡುತ್ತಿದೆ.

ಹುಲಿಯ ಹಾವಳಿಯಿಂದ ರೈತರ ಹಸುಗಳು ಬಲಿಯಾಗುತ್ತಿವೆ ಈ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿ, ಕಳೆದ ಮೂರು ದಿನಗಳ ಹಿಂದೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹುದಿಕೇರಿ ಹೋಬಳಿಯ ಕೋಣಗೇರಿಯಲ್ಲಿ ಪ್ರತಿಭಟನೆ ನಡೆಸಿ ಹಿರಿಯ ಅಧಿಕಾರಿಗಳು ಕೂಡಲೇ ಕ್ರಮವಹಿಸುವಂತೆ ಒತ್ತಾಯ ಹೇರಿದ್ದರು.

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಿ ವಾಪಾಸು ಆಗಿದ್ದರು.ಇದೀಗ ಮತ್ತೆ ಹುಲಿ ದಾಳಿ ನಡೆಸಿದ್ದು ರೈತರ ಜಾನುವಾರು ಬಲಿಯಾಗಿದೆ.

ಸಹಜವಾಗಿಯೇ ಸುತ್ತ ಮುತ್ತಲಿನ ಗ್ರಾಮದ ಜನರು ಭಯ ಭೀತರಾಗಿದ್ದು, ತಕ್ಷಣ ಹುಲಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

ಹುದಿಕೇರಿ ಪಂಚಾಯಿತಿಯ ವ್ಯಾಪ್ತಿಯಲ್ಲಿ ದಿನಂಪ್ರತಿ ಹುಲಿ ದಾಳಿಯಿಂದ ಹಸುಗಳು ಸಾವನಪ್ಪುತ್ತಿವೆ. ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷö್ಯದಿಂದ ದಿನಂಪ್ರತಿ ರೈತರ ಹಸುಗಳು ಹುಲಿಯ ಪಾಲಾಗುತ್ತಿವೆ ಎಂದು ರೈತ ಸಂಘ ಹುದಿಕೇರಿ ಹೋಬಳಿ ಅಧ್ಯಕ್ಷರಾದ ಚಂಗುಲAಡ ಸೂರಜ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ತಿತಿಮತಿ ವಲಯದ ಎಸಿಎಫ್ ಉತ್ತಪ್ಪ ಹುಲಿ ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ರಾಜಪ್ಪ, ಸಿಬ್ಬಂದಿಗಳು ರೈತ ಸಂಘದ ಪದಾಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.

- ಹೆಚ್.ಕೆ. ಜಗದೀಶ್