ಕೂಡಿಗೆ, ಜ. ೭: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸೋಮವಾರಪೇಟೆ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಯವರ ಕಾರ್ಯಾಲಯ ಕುಶಾಲನಗರ ಇವರ ವತಿಯಿಂದ ಜಿಲ್ಲಾ ವಿದ್ಯಾಸಾಗರ ಕಲಾವೇದಿಕೆ ಕುಶಾಲನಗರ ಇವರ ವತಿಯಿಂದ ಆರೋಗ್ಯ ಇಲಾಖೆಯ ಹಲವಾರು ಯೋಜನೆಗಳ ಕುರಿತಂತೆ ಬೀದಿನಾಟಕ ಮತ್ತು ಗೀತಗಾಯನದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವು ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಲುವರಾಜ್ ಕಂಜರ ನುಡಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಲಿಂಗಮೂರ್ತಿ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ವಿದ್ಯಾಸಾಗರ ವೇದಿಕೆಯ ಮುಖ್ಯಸ್ಥ ಈ. ರಾಜು, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಮಣಿ, ಮುರಳಿ, ಗಣೇಶ್ ಉಪಸ್ಥಿತರಿದ್ದರು.
ಉಪನ್ಯಾಸಕ ಕಾವೇರಪ್ಪ ಸ್ವಾಗತಿಸಿ, ಕಲಾ ವೇದಿಕೆಯ ಈ. ರಾಜು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭ ಕಲಾವಿದರಾದ ಚಂದ್ರಪ್ಪ, ಶಿವಕುಮಾರ್, ದೇವರಾಜು, ಗೌರಮ್ಮ, ಸಂತೋಷ, ಗಂಗಾಧರ್ ಅವರುಗಳು ಬೀದಿ ನಾಟಕ ಮತ್ತು ಜಾಗೃತಿ ಗೀತೆಗಳನ್ನು ಹಾಡಿದರು.