ಕಣಿವೆ, ಜ. ೭: ಕುಶಾಲನಗರ - ಶನಿವಾರಸಂತೆ ಮಾರ್ಗದಲ್ಲಿ ಬರುವ ಬಾಣಾವರ ಬಳಿಯ ಕಾಡುಹಾಡಿ ಗಿರಿಜನ ಹಾಡಿಯ ಅಮಾಯಕ ನಿವಾಸಿಗಳು ಸರ್ಕಾರದ ಕನಿಷ್ಟ ಮೂಲಸೌಕರ್ಯಗಳೂ ಇಲ್ಲದೆ ಸಮಸ್ಯೆಗಳಲ್ಲಿಯೇ ಬಂಧಿಯಾಗಿ ಜೀವಿಸುತ್ತಿದ್ದಾರೆ.

ಬಾಣಾವರದಿಂದ ಶನಿವಾರಸಂತೆಗೆ ತೆರಳುವ ಹೆದ್ದಾರಿಯ ಬದಿಯಲ್ಲಿ ಅರಣ್ಯದೊಳಗೆ ಕಳೆದ ಅನೇಕ ವರ್ಷಗಳಿಂದಲೂ ಕಟ್ಟಿಕೊಂಡಿರುವ ಬದುಕು ಹರಕು - ಮುರುಕಾದ ಸೂರಿನೊಳಗೆಯೇ ಕಮರುತ್ತಿದೆ.

ಅಂದರೆ, ಸ್ವಾತಂತ್ರ‍್ಯಾನAತರ ಅಂದಿನಿAದ ಇಂದಿನವರೆಗೂ ಜನರನ್ನಾಳಿರುವ ಹಾಗೂ ಆಳುತ್ತಲೇ ಇರುವ ಯಾವುದೇ ಸರ್ಕಾರಗಳು ಈ ಅಮಾಯಕ ನಿರಕ್ಷರ ಕುಕ್ಷಿಗಳಿಗೆ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ತಲುಪಿಸದ ಕಾರಣ ಈ ಮುಗ್ಧ ಶ್ರಮಿಕವರ್ಗ ಅಂದಿನಿAದಲೂ ಮುಖ್ಯವಾಹಿನಿಯಿಂದ ದೂರವೇ ಉಳಿದಿದೆ.

ಕೇವಲ ಎಂಟೇ - ಎಂಟು ಜೇನು ಕುರುಬ ಕುಟುಂಬಗಳು ಜೀವಿಸುತ್ತಿರುವ ಈ ಹಾಡಿಯಲ್ಲಿ ಒಂದೇ ಒಂದು ಗಿರಿಜನ ಕುಟುಂಬಕ್ಕೆ ಯಾವುದೇ ತರಹದ ಮನೆಯನ್ನು ಇದೂವರೆಗೂ ಕಟ್ಟಿಕೊಟ್ಟಿಲ್ಲ.

ಹಾಗಾಗಿ ಅಪ್ಪ ಹಾಕಿದ ಆಲದ ಮರದ ಕೆಳಗೆ ಜೋತಾಡಿದಂತೆ ಪೂರ್ವಜರು ಕಟ್ಟಿಕೊಂಡು ವಾಸವಿದ್ದ ಪ್ಲಾಸ್ಟಿಕ್ ಹೊದಿಕೆಗಳ, ಕಿತ್ತು ನಿಂತ ಕಬ್ಬಿಣದ ತಗಡುಗಳ ಹೊದಿಕೆಯನ್ನೇ ಸೂರು ಮಾಡಿಕೊಂಡು ಈ ಜನ ವಾಸಿಸುತ್ತಿದ್ದಾರೆ.

ವಿದ್ಯುತ್ ಸಂಪರ್ಕವೇ ಇಲ್ಲ

ಹೆದ್ದಾರಿಯ ಅಂಚಿನಲ್ಲಿ ವಾಸವಿರುವ ಈ ಕಾಡು ಹಾಡಿ ಗಿರಿಜನ ನಿವಾಸಿಗಳಿಗೆ ಇದುವರೆಗೂ ಜಿಲ್ಲಾಡಳಿತ ವಿದ್ಯುತ್ ಸಂಪರ್ಕವನ್ನು ಒದಗಿಸಿಲ್ಲ.

ಹಾಗಾಗಿ ಈ ಜನ ಕತ್ತಲೆಯ ಕೂಪದಲ್ಲಿಯೇ ದಿನಗಳೆಯುತ್ತಿದ್ದಾರೆ. ಇನ್ನು ಶಾಲಾ -ಕಾಲೇಜುಗಳಿಗೆ ಹೋಗುವ ಮಕ್ಕಳು ಪುಸ್ತಕ ಹಿಡಿದು ಓದಲು ವಿದ್ಯುತ್ ಅಥವಾ ಸೋಲಾರ್ ಯಾವ ವ್ಯವಸ್ಥೆಯೂ ಇಲ್ಲದೇ ಶಿಕ್ಷಣವನ್ನೇ ಮೊಟಕುಗೊಳಿಸುತ್ತಿದ್ದಾರೆ. ಅಲ್ಲದೇ, ಹೆತ್ತವರು ಈ ಅಪ್ರಾಪ್ತ ಮಕ್ಕಳನ್ನು ತಮ್ಮ ಜೊತೆ ಕಾಫಿ ಬೆಳೆಗಾರರ ತೋಟಗಳಿಗೆ ಕರೆದೊಯ್ದು ಕೂಲಿ ಮಾಡಿ ಬದುಕುತ್ತಿದ್ದಾರೆ.

ದೀಪ ಉರಿಸಲು ಸೀಮೆಣ್ಣೆಯೂ ಇಲ್ಲ

ವಯೋವೃದ್ಧರು ಹಾಗೂ ಪುಟ್ಟ ಮಕ್ಕಳನ್ನು ಹರುಕು ಮುರುಕಾದ ಸೂರುಗಳಲ್ಲಿಯೇ ಬಿಟ್ಟು ಹೋಗುವ ಗಿರಿಜನ ನಿವಾಸಿಗಳಿಗೆ ರಾತ್ರಿ ಹೊತ್ತು ದೀಪ ಉರಿಸಲು ಸಾಕಾಗುವಷ್ಟು ಸೀಮೆ ಎಣ್ಣೆಯನ್ನು ಕೂಡ ಪೂರೈಸುತ್ತಿಲ್ಲ. ಇದೀಗ ಪಡಿತರ ಅಂಗಡಿಯಿAದ ನೀಡುವ ಕೇವಲ ಒಂದು ಲೀಟರ್ ಸೀಮೆಣ್ಣೆ ಯಾವ ಮೂಲೆಗೂ ಸಾಲುವುದಿಲ್ಲ ಎಂದು ಈ ನಿರ್ಗತಿಕ ಕುಟುಂಬಗಳ ದ್ವಿತೀಯ ಪಿಯು ಓದುತ್ತಿರುವ ನಿಶಾ ಹಾಗೂ ಸ್ವಾತಿ ಎಂಬ ವಿದ್ಯಾರ್ಥಿನಿಯರು ಹೇಳುತ್ತಾರೆ.

ಸೋಲಾರ್ ದೀಪವೂ ಇಲ್ಲ

ನಮಗೆ ವಿದ್ಯುತ್ ದೀಪಗಳ ವ್ಯವಸ್ಥೆ ಕಲ್ಪಿಸಲಾಗದಿದ್ದರೆ ಕೊನೇ ಪಕ್ಷ ಸೋಲಾರ್ ದೀಪವಾದರೂ ಕೊಡಬಹುದಲ್ವಾ. ಗಿರಿಜನರಿಗೆಂದು ಸರ್ಕಾರದಿಂದ ಬರುವ ಯೋಜನೆಗಳನ್ನು ಅಧಿಕಾರಿಗಳು ನಮ್ಮಂತಹ ಕಡುಬಡವರಿಗೆ ನೀಡದೇ ಇನ್ನು ಯಾರಿಗೆ ನೀಡುತ್ತಿದ್ದಾರೆ?

ಇಲ್ಲಿ ಓದುತ್ತಿರುವ ಎಂಟರಿAದ ಹತ್ತು ಮಕ್ಕಳು ಓದೋಕೆ ರಾತ್ರಿ ವೇಳೆ ಬೆಳಕು ಇಲ್ಲದೆ ಕಷ್ಟಪಡ್ತಾ ಇದ್ದಾರೆ. ಸೋಲಾರ್ ದೀಪಗಳಾದರೂ ಮನೆ ಮನೆಗೆ ಕೊಡಿಸಿ ಸರ್ ಎನ್ನುತ್ತಾಳೆ ಪಿಯು ಶಿಕ್ಷಣ ಮುಗಿಸಿರುವ ಸಹನಾ ಎಂಬ ವಿದ್ಯಾರ್ಥಿನಿ.

ಶೌಚಕ್ಕೆ ಕಾಡೇ ಗೂಡು

ಈ ಹಾಡಿಯ ಮಂದಿಗೆ ವಾಸಕ್ಕೆ ಸರಿಯಾದ ಸೂರುಗಳಿಗೆ ಗತಿಯಿಲ್ಲ. ಇನ್ನು ಶೌಚಾಲಯ ಅಳವಡಿಕೆ ಹೇಗೆ ತಾನೇ ಸಾಧ್ಯ...? ಹಾಗಾಗಿ ಸಹಜವಾಗಿಯೇ ಪೂರ್ವಜರು ಅನುಸರಿಸಿಕೊಂಡು ಬಂದAತೆ ಅರಣ್ಯವನ್ನೇ ಈಗಿನ ಮಹಿಳೆಯರು ಹಾಗೂ ಮಕ್ಕಳು ಅವಲಂಬಿಸಿದ್ದಾರೆ.

ಮೊದಲೇ ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಕೂಡಲೇ ಜಿಲ್ಲಾಡಳಿತ ನಮಗೆ ಮನೆ ಹಾಗೂ ಶೌಚಾಲಯ ನಿರ್ಮಿಸಿಕೊಡಲಿ ಎಂಬುದು ನಿವಾಸಿಗಳಾದ ಕೆಂಚ, ಸುರೇಶ, ಸಿದ್ದೇಶ, ಹೊನ್ನ, ಚಂದ್ರಿ, ಶಾರದಾ, ಗಣೇಶ ಮೊದಲಾದವರ ಆಗ್ರಹವಾಗಿದೆ.

ಕುಡಿಯುವ ನೀರಿಗೂ ಬರ

ಹಾಡಿಯ ಬಳಿಯ ಹೆದ್ದಾರಿಯ ಅಂಚಿನಲ್ಲಿ ಕುಡಿಯುವ ನೀರಿನ ಟ್ಯಾಂಕ್ ಒಂದನ್ನು ಈ ಹಿಂದೆ ಅಳವಡಿಸಲಾಗಿದೆ. ಆದರೆ ಶುಚಿತ್ವ ಮಾತ್ರ ಕಾಣದಾಗಿದೆ.

ಹಾಗಾಗಿ ಆ ಟ್ಯಾಂಕ್ ಒಳಗೆ ಕಸ - ಕಡ್ಡಿ ಬೀಳದ ಹಾಗೆ ಈ ನಿವಾಸಿಗಳೇ ಗ್ರೀನ್ ನೆಟ್ ತಂದು ಕಟ್ಟಿಕೊಂಡಿದ್ದಾರೆ.

ಈ ಟ್ಯಾಂಕ್‌ನಲ್ಲಿ ನೀರು ಇಲ್ಲವಾದರೆ ಒಂದು ಕಿಮೀ ದೂರದ ಬಾಣಾವರ ಚೆಕ್ ಪೋಸ್ಟ್ ಬಳಿ ತೆರಳಿ ನೀರನ್ನು ಹೊತ್ತು ತರುತ್ತೇವೆ ಎನ್ನುತ್ತಾರೆ ಇಲ್ಲಿನ ಹೆಣ್ಣು ಮಕ್ಕಳು.

ಕಣ್ಣೆದುರೇ ಕಾಡಾನೆಗಳ ಸಂಚಾರ

ಒಂದಷ್ಟು ದಟ್ಟ ಕಾನನವಿರುವ ಈ ಕಾಡು ಹಾಡಿಯಲ್ಲಿ ಕಾಡಾನೆಗಳು ರಾತ್ರಿ ಇರಲೀ ಹಗಲೇ ಸಂಚಾರ ಮಾಡುತ್ತಿವೆ. ಶೌಚಾಲಯಕ್ಕೆಂದು ತೆರಳಿದಾಗ ಕಾಡಾನೆ ಕಂಡು ಓಡೋಡಿ ಬಂದು ಸೂರು ಸೇರಿಕೊಂಡದ್ದು ಇದೆ. ಏನು ಮಾಡೋದು ಹೇಳಿ. ನಮಗ್ಯಾರು ಸಹಾಯ ಮಾಡ್ತಾರೆ? ಹೇಗೋ ಏನೋ ಬದುಕ್ತಾ ಇದ್ದೀವಿ ಬುಡಿ ಅಂತಾರೆ ಇಲ್ಲಿನ ನಿವಾಸಿ ಹೊನ್ನ.

ಕೂಲಿ ಕೊಟ್ಟವರ ಮನೆ ಮೊಬೈಲ್ ಚಾರ್ಜ್

ತುಂಬಾ ವರ್ಷಗಳ ಹಿಂದೆ ನಮ್ಮನ್ನು ತಂದು ಇಲ್ಲಿ ಕೂರಿಸಿ ನಮಗೆ ಕೃಷಿ ಮಾಡೋಕೆ ಅಂತಾ ಒಂದಷ್ಟು ಜಾಗವನ್ನು ಕೊಟ್ಟಿದ್ದರು. ಆದರೆ ಬೆಳೆ ಮಾಡೋಕೆ ನೀರಿಲ್ಲ. ಜೊತೆಗೆ ಕಾಡಾನೆ ಕಾಟ. ಹಾಗಾಗಿ ಜಾಗವನ್ನೆಲ್ಲಾ ಕಾಡಿಗೊಪ್ಪಿಸಿ ನಾವು ಕೂಲಿಗೆ ಹೋಗ್ತೀವಿ.

ಮನೆಲಿ ಕರೆಂಟ್ ಇಲ್ಲ. ಹಾಗಾಗಿ ಮಕ್ಕಳಿಗೆ ಓದೋಕೆ ಅಂತಾ ತೆಗೆದು ಕೊಟ್ಟಿದ್ದ ಮೊಬೈಲ್‌ಗಳನ್ನು ನಾವು ಕೂಲಿ ಮಾಡೋ ಮಾಲೀಕರ ಮನೆಲಿ ಚಾರ್ಜ್ ಮಾಡಿಕೊಳ್ತೇವೆ ಎಂದು ಕಾರ್ಮಿಕ ಮಹಿಳೆ ಶಾರದಾ ಹೇಳುತ್ತಾರೆ.

ಶಿಕ್ಷಣದ ಮಾಹಿತಿ ಕೊರತೆ

ಈ ಹಾಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳೇ ಇದ್ದು, ಹತ್ತನೇ ತರಗತಿ ಹಾಗೂ ಪಿಯು ಶಿಕ್ಷಣಕ್ಕೆ ತಮ್ಮ ಶಿಕ್ಷಣ ಮೊಟಕುಗೊಳಿಸುತ್ತಿವೆ. ಈ ಬಗ್ಗೆ ಕೇಳಿದರೆ, ನಾವು ಡಿಗ್ರಿಗೆ ಹೋಗಲು ಕುಶಾಲನಗರ ಇಲ್ಲ ಶನಿವಾರಸಂತೆ ಹೋಗಬೇಕು. ಕಾಡಾನೆಗಳ ಕಾಟ. ಬಸ್‌ಗಳು ಸರಿಯಾಗಿ ಸಿಗಲ್ಲ. ಮನೆಯಲ್ಲಿ ನೀನು ಓದಿದ್ದು ಸಾಕು ಅಂತಾರೆ. ಓದೋ ಆಸೆ. ಆದರೆ ವಾತಾವರಣ ಸರಿ ಇಲ್ಲ ಎಂದು ಇಲ್ಲಿನ ವಿದ್ಯಾರ್ಥಿನಿಯರು ಹೇಳಿಕೊಳ್ಳುತ್ತಾರೆ. ಆದ್ದರಿಂದ ಜಿಲ್ಲಾಡಳಿತ ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳನ್ನು ನಿದ್ರೆಯಿಂದ ಎಬ್ಬಿಸಿ ಇಂತಹ ಅಮಾಯಕ ಹಾಗೂ ಮುಗ್ಧ ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿಗೆ ಶ್ರಮಿಸಲು ನಿರ್ದೇಶಿಸ ಬೇಕಿದೆ. ಹಾಗೆಯೇ ಶಿಕ್ಷಣ ಹಾಗೂ ಆರೋಗ್ಯ ಅಧಿಕಾರಿಗಳು ಕೂಡ ಈ ಹಾಡಿಗೆ ಭೇಟಿ ಕೊಟ್ಟು ಈ ಮಕ್ಕಳು ಹಾಗೂ ನಿವಾಸಿ ಗಳಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಲು ಮುಂದಾಗಬೇಕಿದೆ.

- ಕೆ.ಎಸ್. ಮೂರ್ತಿ