ನಾಪೋಕ್ಲು, ಜ. ೭ : ನಿರಂತರ ಕಾಡಾನೆ ದಾಳಿಯಿಂದ ತತ್ತರಿಸಿದ್ದ ನೆಲಜಿ ಭಾಗದ ಜನತೆ ಇದೀಗ ಕೆನ್ನಾಯಿ ಹಾವಳಿಯಿಂದ ಆತಂಕ ಎದುರಿಸುತ್ತಿದ್ದಾರೆ. ಈ ವಿಭಾಗದ ಚಿಯಕಪೂವಂಡ, ಮಾಳೇಯಂಡ, ಕೈಬುಲೀರ, ಚೆಟ್ಟಿನೆರವಂಡ, ಪಂಜೇರಿರ, ಅಪ್ಪುಮಣಿಯಂಡ, ಬೊಟ್ಟೋಳಂಡ, ಕೋಟೆರ ಮತ್ತಿತರ ಕುಟುಂಬದವರ ಕಾಫಿ, ಅಡಿಕೆ,

(ಮೊದಲ ಪುಟದಿಂದ) ಬಾಳೆ, ಮತ್ತು ಭತ್ತದ ಗದ್ದೆಗಳು ಕಾಡಾನೆಗಳ ಪಾಲಾಗಿದ್ದು ಬೆಳೆಗಾರನಿಗೆ ದಿಕ್ಕು ಕಾಣದಂತಾಗಿದೆ. ಕಾಡಾನೆಗಳ ಹಿಂಡು ನಿರಂತರ ದಾಳಿ ನಡೆಸುತ್ತಿದೆ. ಅದರೊಂದಿಗೆ ಕೆನ್ನಾಯಿಗಳ ಹಿಂಡು ಗ್ರಾಮದಲ್ಲಿದ್ದು ೭ ನಾಯಿಗಳಿರುವ ಹಿಂಡು ಕಾಡು ಹಂದಿಯನ್ನು ಬೇಟೆಯಾಡಿದೆ. ಇದರಿಂದ ಕಾರ್ಮಿಕರು ಮತ್ತು ತೋಟದ ಮಾಲೀಕರು ತೋಟಕ್ಕೆ ಹೋಗಲು ಭಯಪಡುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆಯವರು ಕಾಡಾನೆ ಮತ್ತು ಕೆನ್ನಾಯಿಗಳನ್ನು ಓಡಿಸಲು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮಸ್ಥರ ಪರವಾಗಿ ಮಾತನಾಡಿದ ನೆಲಜಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಯಕಪೂವಂಡ ಅಪ್ಪಚ್ಚು, ನೆಲಜಿ ವಿಭಾಗದಲ್ಲಿ ನಿರಂತರ ಕಾಡಾನೆ, ಕೆನ್ನಾಯಿಗಳ ಹಾವಳಿ ಇದ್ದರು ಅರಣ್ಯ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಗ್ರಾಮಸ್ಥರು ಹಲವಾರು ಬಾರಿ ಅರಣ್ಯ ಇಲಾಖೆಗೆ ಹಾವಳಿ ಬಗ್ಗೆ ತಿಳಿಸಿದ್ದರು ಇದುವರೆಗೂ ಇಲಾಖೆಯವರು ಯಾವುದೇ ಕ್ರಮಕೈಗೊಂಡಿಲ್ಲ ಕೂಡಲೇ ಇಲಾಖೆಯವರು ಕಾಡಾನೆ ಮತ್ತು ಕೆನ್ನಾಯಿಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಮಾಡಬೇಕಾದಿತ್ತು ಎಂದು ಎಚ್ಚರಿಸಿದ್ದಾರೆ. - ದುಗ್ಗಳ