ಗೋಣಿಕೊಪ್ಪಲು, ಜ. ೫: ಕಪ್ಪು ಬಂಗಾರವೆAದೇ ಕರೆಯಲ್ಪಡುವ ಕೊಡಗಿನ ಕರಿಮೆಣಸಿಗೆ ಇದೀಗ ಉತ್ತಮ ಬೆಲೆ ಬಂದಿದ್ದು ನಾಡಿನ ರೈತ ಕೊಂಚ ನಿಟ್ಟುಸಿರು ಬಿಟ್ಟಿದ್ದಾನೆ.

ಪ್ರತಿವರ್ಷವೂ ರೈತ ಬೆಳೆದ ಬೆಳೆಗಳು ವಿಪರೀತ ಮಳೆಯಿಂದ ಹಾಳಾಗಿ, ಇನ್ನೇನು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು ಎನ್ನುವಷ್ಟರಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿತ್ತು.

ಪ್ರಸ್ತುತ ಕರಿಮೆಣಸಿಗೆ ಉತ್ತಮ ಬೆಲೆ ಬಂದಿದೆ. ಇದರಿಂದಾಗಿ ಕಷ್ಟದಲ್ಲಿರುವ ರೈತನಿಗೆ ಕೊಂಚ ನೆಮ್ಮದಿ ತಂದAತಾಗಿದೆ, ಆದರೆ ಬೆಳೆದ ಬೆಳೆಯನ್ನು ಇನ್ನೇನು ವ್ಯಾಪಾರ ಮಾಡಬೇಕು ಎನ್ನುವಷ್ಟರಲ್ಲಿ ಕರಿಮೆಣಸು ಅನ್ಯರ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ.

ರೈತರ ತೋಟಗಳಿಗೆ ತೆರಳುವ ಕೆಲವು ಕಾರ್ಮಿಕರು ಕರಿಮೆಣಸು ಕೊಯ್ದು ಅದನ್ನು ಮಾಲೀಕರ ಮನೆಗೆ ಸಾಗಿಸುವ ಸಂದರ್ಭದಲ್ಲಿ ಕೆಲವು ಮೆಣಸು ಚೀಲವನ್ನು ತೋಟದಲ್ಲಿಯೇ ಅಡಗಿಸಿಟ್ಟು ಅದನ್ನು ರಾತ್ರಿಯ ವೇಳೆ ತೋಟದ ಮಾಲೀಕರ ಕಣ್ಣು ತಪ್ಪಿಸಿ ಹಸಿಹಸಿಯಾದ ಕರಿ ಮೆಣಸನ್ನು ತಮಗೆ ಬೇಕಾದ ಜಾಗಕ್ಕೆ ಸಾಗಿಸುವ ಮೂಲಕ ರೈತನಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ.

ಇಂತಹ ಕರಿಮೆಣಸು ಖರೀದಿ ಮಾಡುವ ಸಲುವಾಗಿ ನಗರ ಪ್ರದೇಶದಲ್ಲಿ ಅಣಬೆಗಳಂತೆ ವ್ಯಾಪಾರದ ಅಂಗಡಿಗಳು ಈಗಾಗಲೇ ತಮ್ಮ ಕೌಂಟರ್ ಆರಂಭಿಸಿವೆ. ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ನಂತರ ಇಂತಹ ಮಾರಾಟದ ಅಂಗಡಿಗಳು ತಮ್ಮ ಬಾಗಿಲು ಬಂದ್ ಮಾಡಿ ಮುಂದಿನ ವರ್ಷಕ್ಕಾಗಿ ಎದುರು ನೋಡುತ್ತಾರೆ.

ಕೇವಲ ಮೂರೇ ತಿಂಗಳಲ್ಲಿ ರೈತರ ತೋಟಗಳಿಂದ ಕದ್ದು ತರುವ ಕರಿಮೆಣಸು ವ್ಯಾಪಾರದಿಂದ ಕೆಲವರು ಲಕ್ಷಾಂತರ ವ್ಯವಹಾರ ನಡೆಸಿ ಶ್ರೀಮಂತರಾಗುತ್ತಿದ್ದಾರೆ.

ತೋಟದ ಕೆಲಸಕ್ಕೆ ಬರುವ ಇಂತಹ ಕೆಲವು ಕಾರ್ಮಿಕರ ಬಗ್ಗೆ ತೋಟ ಮಾಲೀಕರು ಎಚ್ಚರ ವಹಿಸಬೇಕಾಗಿರುವುದು ಅನಿವಾರ್ಯವಾಗಿದೆ.

ಇತ್ತ ರೈತರ ಕಣದಲ್ಲಿ ಒಣಗಿಸಲು ಹಾಕಿರುವ ಕರಿಮೆಣಸನ್ನು ದಿನಕ್ಕೆ ಇಷ್ಟೆಂದು ಕದಿಯುವುದು ಹೊಸತೇನಲ್ಲ. ಮಾಲೀಕರಿಗೆ ಸಂಶಯ ಬಾರದ ರೀತಿಯಲ್ಲಿ ಸ್ವಲ್ಪ, ಸ್ವಲ್ಪವೇ ಕರಿಮೆಣಸನ್ನು ಸಂಗ್ರಹಿಸಿ ಅದನ್ನು ವಾರದ ಒಂದು ದಿನ ಒಟ್ಟು ಮಾಡಿ ತೋಟದ ಮಾಲೀಕರು ಮನೆಯಲ್ಲಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಬ್ಯಾಗ್‌ನಲ್ಲಿ ತುಂಬಿ ನಗರಕ್ಕೆ ಆಗಮಿಸಿ ಸಿಕ್ಕ ಬೆಲೆಗೆ ಮಾರಾಟ ಮಾಡಿ ತೆರಳುತ್ತಾರೆ.

ಈ ಬಗ್ಗೆ ತೋಟದ ಮಾಲೀಕರು ಎಚ್ಚರ ವಹಿಸಬೇಕು, ಕದ್ದು ತರುವ ಕರಿಮೆಣಸು ಖರೀದಿಸುವ ವರ್ತಕರ ಮೇಲೆ ಪೊಲೀಸರು ಕ್ರಮಕ್ಕೆ ಮುಂದಾಗಬೇಕು.

ದುಬಾರಿ ವೇತನ

ತೋಟದ ಕೆಲಸಕ್ಕೆ ಕಾರ್ಮಿಕರು ಹೆಚ್ಚಾಗಿ ಸಿಗುತ್ತಿಲ್ಲ, ಇದರಿಂದಾಗಿ ಅಸ್ಸಾಂನವರು ಹೆಚ್ಚಾಗಿ ಹಲವು ತೋಟದಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ವಾರದ ಸಂತೆ ದಿನದಲ್ಲಿ ಹೆಚ್ಚಾಗಿ ಇವರು ನಗರ ಪ್ರದೇಶಗಳಲ್ಲಿ ತಮ್ಮ ಅಗತ್ಯ ಸಾಮಗ್ರಿಗಳನ್ನು ಪಡೆಯಲು ಆಗಮಿಸುತ್ತಾರೆ. ಇವರುಗಳ ಮೇಲೆ ತೋಟದ ಮಾಲೀಕರು ಒಂದಷ್ಟು ನಿಗಾವಹಿಸುವ ಅಗತ್ಯತೆ ಇದೆ.

ಕದ್ದ ಮಾಲಿಗೆ ಪೈಪೋಟಿ..!

ವಾಣಿಜ್ಯ ನಗರವಾದ ಗೋಣಿಕೊಪ್ಪದಲ್ಲ್ಲಿ ಗ್ರಾಮಾಂತರ ಪ್ರದೇಶದಿಂದ ಆಗಮಿಸುವ ಬಡ ಕಾರ್ಮಿಕರು ಕದ್ದು ತರುವ ಅಲ್ಪಸ್ವಲ್ಪ ಕರಿಮೆಣಸು ಖರೀದಿ ಮಾಡಲು ನಗರದ ಬಸ್ ನಿಲ್ದಾಣದಲ್ಲಿ ಮುಂಜಾನೆ ಏಳು ಗಂಟೆಯ ವೇಳೆ ಬಕಪಕ್ಷಿಯಂತೆ ಕಾದು ಕುಳಿತಿರುತ್ತಾರೆ. ಕಾರ್ಮಿಕರು ತರುವ ಬ್ಯಾಗ್ ಸಹಿತ ಇವರನ್ನು ತಮ್ಮ ತಮ್ಮ ಅಂಗಡಿಗೆ ಕರೆದೊಯ್ದು ವ್ಯವಹಾರ ಕುದುರಿಸುತ್ತಾರೆ.

ವ್ಯಾಪಾರದಲ್ಲಿ ಭಾರಿ ಮೋಸ.!!

ಕರಿಮೆಣಸನ್ನು ತೋಟದಿಂದ ಕದ್ದು ತರುವ ಕಾರ್ಮಿಕರನ್ನು ಟಾರ್ಗೆಟ್ ಮಾಡುವ ಕೆಲವು ಏಜೆಂಟರು, ಇವರಿಂದ ಬಲವಂತವಾಗಿ ಮೆಣಸನ್ನು ಖರೀದಿ ಮಾಡಿ ತಮಗೆ ಬೇಕಾದ ಬೆಲೆ ನಿಗದಿಪಡಿಸಿ ಕಳುಹಿಸುತ್ತಾರೆ. ಅಲ್ಲದೆ ತೂಕದಲ್ಲಿ ಮೋಸ ಮಾಡುವುದು ಇವರಿಗೆ ಹೊಸತೇನಲ್ಲ. ಸಿಕ್ಕ ಹಣವನ್ನು ಪಡೆದ ಕಾರ್ಮಿಕ ನಂತರ ಪೆಚ್ಚು ಮೋರೆ ಹಾಕಿಕೊಂಡು ಮನೆಗೆ ವಾಪಾಸು ಆಗುವುದು ಮಾಮೂಲಿಯಾಗಿದೆ.

- ಹೆಚ್.ಕೆ. ಜಗದೀಶ್