ಸೋಮವಾರಪೇಟೆ, ಜ. ೪: ಸಹಕಾರ ಸಂಘಗಳಿAದ ಪಡೆದ ಸಾಲವನ್ನು ಸಕಾಲದಲ್ಲಿ ಪ್ರಾಮಾಣಿಕ ವಾಗಿ ಮರುಪಾವತಿ ಮಾಡುವ ಸದಸ್ಯರಿಗೆ ಬಡ್ಡಿಯಲ್ಲಿ ಅಲ್ಪ ವಿನಾಯಿತಿ ನೀಡುವಂತಾಗಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಲಹೆ ನೀಡಿದರು.

ಪಟ್ಟಣದಲ್ಲಿ ರೂ. ೩೦ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ, ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಹಿಳೆಯರೇ ಸೇರಿ ಬ್ಯಾಂಕ್ ಕಟ್ಟುವುದು ಸುಲಭವಲ್ಲ. ಆದರೆ ಸೋಮವಾರಪೇಟೆಯ ಈ ಸಂಘ ಮಾದರಿಯಾಗಿದೆ. ಸಹಕಾರ ಸಂಘಗಳಲ್ಲಿ ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿ ಮಾಡಿದರೆ ಮಾತ್ರ ಸಹಕಾರ ಕ್ಷೇತ್ರ ಉಳಿಯಲಿದೆ ಎಂದರು.

ಮಹಿಳಾ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಈಗಾಗಲೇ ೩ ಲಕ್ಷ ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ ೩ ಲಕ್ಷ ಅನುದಾನ ಒದಗಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಭದ್ರತಾ ಕೊಠಡಿ ಉದ್ಘಾಟಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, ಜಿಲ್ಲೆಯಲ್ಲಿ ೩೭೬ ಸಹಕಾರ ಸಂಘಗಳಿದ್ದು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ೨೭೮ ಸಂಸ್ಥೆಗಳು ಸದಸ್ಯತ್ವ ಪಡೆದಿವೆ. ಸಹಕಾರ ಸಂಘಗಳ ಅಭಿವೃದ್ಧಿಗೆ ಡಿಸಿಸಿ ಬ್ಯಾಂಕ್ ನೆರವು ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಮಹಿಳಾ ಸಹಕಾರ ಸಂಘಕ್ಕೆ ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್ ನಿಂದಲೂ ಅನುದಾನ ನೀಡಲು ಪ್ರಯತ್ನಿಸಲಾಗುವುದು ಎಂದರು.

ಕೌಂಟರ್ ವಿಭಾಗ ಉದ್ಘಾಟಿಸಿದ ಬಿ.ಡಿ. ಮಂಜುನಾಥ್ ಮಾತನಾಡಿ, ಹಿರಿಯ ಸಹಕಾರಿಗಳ ತ್ಯಾಗದಿಂದಾಗಿ ಇಂದು ಸಹಕಾರ ಕ್ಷೇತ್ರ ಕೊಡಗಿನಲ್ಲಿ ಬಲಿಷ್ಠವಾಗಿ ಬೆಳೆದಿದೆ. ನಿಸ್ವಾರ್ಥ ಸೇವೆಯಿಂದ ಮಾತ್ರ ಸಂಘಗಳು ಉಳಿಯಲಿವೆ. ವಿನೂತನ ಯೋಜನೆಗಳನ್ನು ಸಹಕಾರ ಸಂಘ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರ ಸಂಘದ ಅಧ್ಯಕ್ಷೆ ಜಲಜಾ ಶೇಖರ್, ಅಕ್ಕನಬಳಗದ ಮೂಲಕ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘ ರೂಪುಗೊಂಡಿತು. ಎಲ್ಲಾ ಜಾತಿ, ವರ್ಗ, ಧರ್ಮದ ಸದಸ್ಯರು ಈ ಸಂಘದಲ್ಲಿದ್ದಾರೆ. ಸಂಘವು ಉತ್ತಮವಾಗಿ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಎಸ್.ಬಿ. ಭರತ್ ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಕೆ. ಮಾದಪ್ಪ, ತಾಲೂಕು ಸಹಕಾರ ಅಧಿಕಾರಿ ಮೋಹನ್, ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಜಯಂತಿ ಶಿವಕುಮಾರ್ ಅವರುಗಳು ಉಪಸ್ಥಿತರಿದ್ದರು.

ಸಂಘದ ಮಾಜಿ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಿರ್ದೇಶಕರಾದ ಕವಿತಾ ವಿರೂಪಾಕ್ಷ, ಕಾರ್ಯದರ್ಶಿ ಪೃಥ್ವಿ ಚಂದ್ರಶೇಖರ್, ಶೋಭಾ ಶಿವರಾಜ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.