ಕೂಡಿಗೆ, ಜ. ೬: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದ ಗಣೇಶ್ ಎಂಬವರಿಗೆ ಸೇರಿದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ.

ಚಿಕ್ಕ ಅಳುವಾರ ಗ್ರಾಮ ಅಂಬೇಡ್ಕರ್ ಕಾಲೋನಿಯ ಸಮೀಪದ ಗಣೇಶ್ ಎಂಬವರಿಗೆ ಸೇರಿದ ಮೂರು ಹಸುಗಳನ್ನು ಮುಂಜಾನೆ ೭ ಗಂಟೆಯ ಸಮಯದಲ್ಲಿ ತಮ್ಮ ಕೊಟ್ಟಿಗೆಯಿಂದ ನೂರು ಮೀಟರ್ ದೂರದಲ್ಲಿದ್ದ ಭತ್ತದ ಕಣದಲ್ಲಿ ಮೇಯಲು ಬಿಟ್ಟ ಸಂದರ್ಭ ಚಿರತೆ ಒಂದು ಹಸುವನ್ನು ಎಳೆದುಕೊಂದು ಹೋಗಿ ತಿಂದು ಹಾಕಿದೆ.

ಹಸುವಿನ ಮಾಲೀಕ ಗಣೇಶ್ ಹಿಂತಿರುಗಿ ಬಂದಾಗ ಮೂರು ಹಸುಗಳಲ್ಲಿ ಎರಡು ಮಾತ್ರ ಇವೆ ಎಂದು ಹುಡುಕಾಟ ನಡೆಸಿದಾಗ ಹಸು ಬಲಿಯಾಗಿರುವುದು ಗೋಚರಿಸಿದೆ. ಸ್ಥಳಕ್ಕೆ ತೊರೆನೂರು ಗ್ರಾಮ ಪಂಚಾಯಿತಿ ಸದಸ್ಯರಾದ ದೇವರಾಜ್, ಜಿ.ಟಿ. ಶೋಭಾ, ಮಹದೇವ, ಬಾಣವಾರ ಉಪ ವಲಯ ಅರಣ್ಯ ಅಧಿಕಾರಿ ಪುನೀತ್ ಸೇರಿದಂತೆ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.