ಮಡಿಕೇರಿ, ಜ. ೬: ಕೊಡಗು ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಅನ್ನು ಹಿಂಪಡೆಯಬೇಕು ಇಲ್ಲವಾದರೆ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ಎಚ್ಚರಿಕೆ ನೀಡಿದೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಕೆ. ಮಂಜುನಾಥ ಕುಮಾರ್ ಕೊಡಗಿನಲ್ಲಿ ಕೊರೊನಾ ಹಾವಳಿ ನಿಯಂತ್ರಣದಲ್ಲಿದೆ. ಸುಮಾರು ಎರಡು ವರ್ಷಗಳಿಂದ ನೆಲಕಚ್ಚಿದ್ದ ವ್ಯಾಪಾರೋದ್ಯಮ ಈಗ ತಾನೆ ಕೊಂಚ ಚೇತರಿಕೆ ಕಾಣುತ್ತಿದೆ. ಹೀಗಿರುವಾಗ ಅವೈಜ್ಞಾನಿಕ ರೀತಿಯಲ್ಲಿ ಕೊಡಗಿನಲ್ಲಿ ವೀಕೆಂಡ್ ಕರ್ಫ್ಯೂ ವಿಧಿಸುವುದರಿಂದ ಪ್ರವಾಸೋದ್ಯಮವನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳಿದಂತಾಗುತ್ತದೆ. ಆದ್ದರಿಂದ ಕೊಡಗಿನಲ್ಲಿ ವೀಕೆಂಡ್ ಕರ್ಫ್ಯೂ ನಿಯಮವನ್ನು ಕೂಡಲೇ ಹಿಂಪಡೆಯಬೇಕು. ಸಂಸದರು, ಶಾಸಕರು, ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಒಕ್ಕೂಟದಿಂದ ಪ್ರತಿಭಟನೆ ಮಾಡುವುದಾಗಿ ಮಂಜುನಾಥ್ ಕುಮಾರ್ ತಿಳಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ವರದ, ಸಂಘಟನಾ ಕಾರ್ಯದರ್ಶಿ ನಾಣಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಪದ್ಮ, ಮಧುಕುಮಾರ್, ನಿರ್ದೇಶಕ ಮಂಡೀರ ಸದಾ ಮುದ್ದಪ್ಪ ಉಪಸ್ಥಿತರಿದ್ದರು.