ಸಿದ್ದಾಪುರ, ಜ. ೪: ಮೀನು ಹಿಡಿಯುವ ಸಂದರ್ಭ ವ್ಯಕ್ತಿಯೋರ್ವ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸಿದ್ದಾಪುರ ಸಮೀಪದ ಹಚ್ಚಿನಾಡು ಗ್ರಾಮದಲ್ಲಿ ನಡೆದಿದೆ.

ಪಂಜರಿ ಯರವರ ಪುಟ್ಟ (೪೫) ಕೆರೆಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ. ಗ್ರಾಮದ ತಾರ ಗಣಪತಿ ಅವರ ತೋಟದ ಕಾರ್ಮಿಕನಾಗಿದ್ದ ಪುಟ್ಟ ತಾ. ೩ರಂದು ತೋಟದ ಕೆರೆಯಲ್ಲಿ ಮೀನು ಹಿಡಿಯಲೆಂದು ಯಾರಿಗೂ ಹೇಳದೆ ತೆರಳಿದ್ದಾರೆ.

ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆ ರಾತ್ರಿ ಪೂರ್ತಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ನಂತರ ತಾ.೪ರ ಬೆಳಿಗ್ಗೆ ಕೆರೆ ಬಳಿ ಪುಟ್ಟನ ಚಪ್ಪಲಿ ದೊರೆತಿದ್ದು, ಈಜುಗಾರರು ಕೆರೆಯಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.