ಭಾಗಮಂಡಲ, ಜ. ೪: ಜಿಲ್ಲೆಯ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳನ್ನು ದೇವಾಲಯಗಳ ನಗರಿ (ಟೆಂಪಲ್ ಟೌನ್) ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ತಾ. ೫ ರಂದು (ಇಂದು) ನಡೆಸಲು ಉದ್ದೇಶಿಸಿರುವ ಸಭೆಗೆ ಭಾಗಮಂಡಲ ಸುತ್ತಮುತ್ತಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಗ್ರಾಮಸಭೆಯ ಬಳಿಕ ಸಾಧಕ-ಬಾಧಕ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವಂತೆ ತೀರ್ಮಾನಿಸ ಲಾಯಿತು.
ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಈ ಸಂಬAಧ ನಡೆದ ಸಭೆಯಲ್ಲಿ ಟೆಂಪಲ್ ಟೌನ್ ಕುರಿತು ಸುದೀರ್ಘ ಚರ್ಚೆಗಳು ನಡೆದವು. ಹಲವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಟೆಂಪಲ್ ಟೌನ್ ಮಾಡುವುದಾದರೆ ಇಡೀ ಜಿಲ್ಲೆಯನ್ನು ಮಾಡಲಿ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮಸ್ಥರ ಸಲಹೆ ಹಾಗೂ ಅಭಿಪ್ರಾಯ ಪಡೆಯದೆ ಸಂಘಟನೆಯೊAದರ ಮನವಿ ಹಿನ್ನೆಲೆ ಜಿಲ್ಲಾಡಳಿತ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರವನ್ನು ಟೆಂಪಲ್ ಟೌನ್ ಮಾಡುವ ಸಂಬAಧ ಸಭೆ ಕರೆದಿರುವುದು ಸರಿಯಲ್ಲ. ಜೊತೆಗೆ ಸಭೆಗೆ ಗ್ರಾಮಸ್ಥರನ್ನು ಆಹ್ವಾನಿಸಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದ ಸ್ಥಳೀಯರು, ತಾ. ೧೮ ರಂದು ನಡೆಯುವ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಈ ಬಗ್ಗೆ ಒಮ್ಮತದ ತೀರ್ಮಾನ ತೆಗೆದುಕೊಳ್ಳುವ ತನಕ ಯಾವುದೇ ನಿರ್ಧಾರ ಪ್ರಕಟಿಸ ಬಾರದು ಎಂದು ಒತ್ತಾಯಿಸಿದರು.
ಭಾಗಮಂಡಲ ಜನತೆ ಇಲ್ಲಿನ ಕಟ್ಟುಪಾಡನ್ನು ಕ್ರಮಬದ್ಧವಾಗಿ ಆಚರಿಸುತ್ತ ಸಂಪ್ರದಾಯ ಪಾಲನೆ ಮಾಡುತ್ತಿದೆ. ಸಂಸ್ಕೃತಿಯನ್ನು ಉಳಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಸಭೆಯಲ್ಲಿ ಹೇಳಿದರು. ಭಾಗಮಂಡಲ ದಲ್ಲಿ ಚಾಮುಂಡಿ ಹಾಗೂ ಗುಳಿಗನ ಆರಾಧ್ಯ ಸ್ಥಾನಗಳಿದ್ದು ನಿಡ್ಯಮಲೆ ಕುಟುಂಬಸ್ಥರು ಇಲ್ಲಿ ಸಾಂಪ್ರದಾಯಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಭಾಗಮಂಡಲ ಟೆಂಪಲ್ ಟೌನ್ ಆದರೆ ಈ ದೈವಾರಾಧನೆಯ ಸ್ಥಾನಗಳನ್ನು ಬದಲಾಯಿಸಬೇಕಾಗುತ್ತದೆ. ಆ ಮೂಲಕ ಸಾಂಪ್ರದಾಯಿಕ ಆಚರಣೆಗಳಿಗೆ ಧಕ್ಕೆ ಉಂಟಾಗುತ್ತದೆ. ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರದಿಂದ ಸಾಮರಸ್ಯಕ್ಕೆ ಧಕ್ಕೆಯಾಗಲಿದೆ. ಭಾಗಮಂಡಲವನ್ನು ಟೆಂಪಲ್ ಟೌನ್ ಮಾಡುವುದರ ವಿರುದ್ಧ ಯಾವುದೇ ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂದು ಗ್ರಾಮಸ್ಥರು ಎಚ್ಚರಿಸಿದರು. ಸಭೆಯಲ್ಲಿ ಎಲ್ಲಾ ವರ್ಗದ ಜನರು ಪಾಲ್ಗೊಂಡಿದ್ದರು.
ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಸದಸ್ಯರಾದ ನಾಗೇಶ್, ಕಾಳನ ರವಿ, ನಿತ್ಯಾನಂದ, ಅಯ್ಯಂಗೇರಿ ಗ್ರಾ.ಪಂ. ಅಧ್ಯಕ್ಷ ರಂಜಿತ್, ಗ್ರಾಮಸ್ಥರಾದ ಕುದುಕುಳಿ ಭರತ್, ತೀರ್ಥರಾಮ್, ರಾಜ ರೈ, ಸುನಿಲ್ ಪತ್ರವೊ, ರವಿಶಂಕರ್, ಅಮೆ ಹರೀಶ್, ಹೊಸಗದ್ದೆ ಬಾಸ್ಕರ್, ಪಟ್ಟಮಾಡ ಸುಧೀರ್, ಸೂರ್ತಲೆ ಜಯಂತ, ಜಿ.ಪಂ. ಮಾಜಿ ಸದಸ್ಯ ರಾಜೀವ್. ಮಿಟ್ಟು ರಂಜಿತ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕರಿಂ ಸೇರಿದಂತೆ ಸ್ಥಳೀಯ ಸಂಘಟನೆ ಪ್ರಮುಖರು ಭಾಗವಹಿಸಿದ್ದರು.