ಸಂಸದ ಹಾಗೂ ಸಚಿವರ ನಡುವೆ ಕಿತ್ತಾಟ

ರಾಮನಗರ, ಜ. ೩: ರಾಮನಗರದಲ್ಲಿಂದು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಬೇಕಿದ್ದ ವೇದಿಕೆಯಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿಯೇ ಸಂಸದ ಡಿ.ಕೆ. ಸುರೇಶ್ ಹಾಗೂ ಸಚಿವ ಅಶ್ವತ್ಥ ನಾರಾಯಣ ಪರಸ್ಪರ ವಾಗ್ವಾದಕ್ಕಿಳಿದ ಪ್ರಸಂಗ ನಡೆದಿದೆ. ರಾಮನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ನಾಡಪ್ರಭು ಕೆಂಪೇಗೌಡ, ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳ ಅನಾವರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಆಯೋಜಿತವಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ನೀರಾವರಿ ಯೋಜನೆಗಳ ಅನುಷ್ಠಾನ ಬಿಜೆಪಿ ಸರ್ಕಾರದಿಂದಲೇ ಸಾಧ್ಯ. ತಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಜಿಲ್ಲೆಯಲ್ಲಿ ನೆರವೇರಿಸಿದೆ. ಇಲ್ಲಿ ಬಿಜೆಪಿ ಪ್ರತಿನಿಧಿ ಇಲ್ಲದಿದ್ದರೂ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿಲ್ಲ. ತಮ್ಮ ಸರ್ಕಾರದಲ್ಲೇ ಯೋಜನೆಗಳನ್ನು ರೂಪಿಸಿ ತಮ್ಮ ಅವಧಿಯಲ್ಲಿಯೇ ಸಂಪೂರ್ಣಗೊಳಿಸುತ್ತೇವೆ ಎಂದಿದ್ದಾರೆ. ಈ ಹಂತದಲ್ಲಿ ಸಿಟ್ಟಾದ ಡಿ.ಕೆ. ಸುರೇಶ್, ಸಚಿವ ಅಶ್ವತ್ಥ ನಾರಾಯಣ ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ವೇದಿಕೆಯಲ್ಲಿಯೇ ಧರಣಿ ಕುಳಿತಿದ್ದಾರೆ. ಇದರಿಂದ ಆಕ್ರೋಶಗೊಂಡ ಅಶ್ವತ್ಥ ನಾರಾಯಣ, ಸಿಎಂ ಕಾರ್ಯಕ್ರಮಕ್ಕೆ ಅಗೌರವ ತೋರುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದಿದ್ದು, ವಿಧಾನಪರಿಷತ್ ಸದಸ್ಯ ಸಿ. ರವಿ, ಅಶ್ವತ್ಥ ನಾರಾಯಣ ಅವರು ಮಾತನಾಡುತ್ತಿದ್ದ ಮೈಕ್ ಕಿತ್ತುಕೊಂಡ ಘಟನೆಯೂ ನಡೆದಿದೆ. ಸಂಸದ ಹಾಗೂ ಸಚಿವರ ವಾಗ್ವಾದದಿಂದಾಗಿ ತುಸುಹೊತ್ತು ಕಾರ್ಯಕ್ರಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು

೪೦ ಲಕ್ಷ ಮಕ್ಕಳಿಗೆ ಕೋವಿಡ್ ಲಸಿಕೆ

ನವದೆಹಲಿ, ಜ. ೩: ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿರುವ ಮಧ್ಯೆ ಮಕ್ಕಳಿಗೆ ವ್ಯಾಕ್ಸಿನೇಷನ್ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ಇಂದಿನಿAದ ದೇಶದಲ್ಲಿ ೧೫ ರಿಂದ ೧೮ ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಲಾಗಿದ್ದು, ಮೊದಲ ದಿನವೇ ಸುಮಾರು ೪೦ ಲಕ್ಷ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಈ ಕುರಿತಂತೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊAಡಿರುವ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸೂಖ್ ಮಾಂಡವೀಯಾ, ವೆಲ್ಡನ್ ಯಂಗ್ ಇಂಡಿಯಾ, ಮಕ್ಕಳಿಗೆ ಲಸಿಕೆ ಅಭಿಯಾನದ ಮೊದಲ ದಿನವಾದ ಇಂದು ರಾತ್ರಿ ೮ ಗಂಟೆಯವರೆಗೂ ದೇಶದಲ್ಲಿ ಸುಮಾರು ೪೦ ಲಕ್ಷ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.